ಮೈಸೂರು: ಮೈಸೂರು ದಸರಾ ಅಂಗವಾಗಿ ಯುವ ಸಂಭ್ರಮ ಕಾರ್ಯಕ್ರಮ ಅ. 6ರಿಂದ 13ರವರೆಗೆ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆಯಲಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಟ್ಕರ್ ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಯುವ ಸಂಭ್ರಮ ಕುರಿತು ಮಾಹಿತಿ ನೀಡಿದರು.
ಮೈಸೂರಿನ ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಯುವ ಸಂಭ್ರಮವನ್ನು ಅ.6ರಂದು ಸಂಜೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಉದ್ಘಾಟನೆಯ ದಿನದಂದು ಚಿತ್ರ ನಟ ವಶಿಷ್ಟ ಸಿಂಹ ಹಾಗೂ ಹರಿಪ್ರಿಯ ತಾರಾ ಮೆರಗು ನೀಡಲಿದ್ದಾರೆ ಎಂದು ತಿಳಿಸಿದರು.
ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧಡೆಯಿಂದ 4೦೦ಕ್ಕೂ ಹೆಚ್ಚು ಅರ್ಜಿಗಳು ಬಂದಿದೆ. ರಾಜ್ಯದಲ್ಲಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು.
ಈ ಬಾರಿ ಚಂದ್ರಯಾನ, ರಾಷ್ಟ್ರೀಯ ಭಾವೈಕ್ಯತೆ, ನಾಡು ನುಡಿಗಾಗಿ ಹೋರಾಡಿದವರು ಸೇರಿದಂತೆ 20 ವಿಷಯ ಕುರಿತು ನೃತ್ಯ ಪ್ರದರ್ಶನ ನೀಡಲು ಕಾಲೇಜು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.
ಪ್ರತಿ ಕಾಲೇಜಿಗೆ 5 ನಿಮಿಷ ಕಾಲಾವಕಾಶವನ್ನು ನೀಡಲಾಗಿದೆ ಎಂದು ಸೀಮಾ ಲಾಟ್ಕರ್ ತಿಳಿಸಿದರು.
ಪ್ರತಿದಿನ ಸಂಜೆ 5ರಿಂದ ರಾತ್ರಿ10 ಗಂಟೆವರೆಗೆ ಯುವ ಸಂಭ್ರಮ ನಡೆಯಲಿದೆ ಎಂದು ವಿವರಿಸಿದರು.