ಮೈಸೂರು: ನಾಡಹಬ್ಬ ದಸರಾ ಪ್ರಯುಕ್ತ ಹಮ್ಮಿಕೊಂಡಿರುವ ಎಲ್ಲಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ರೂಪಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತವಾರಿ ಸಚಿವ ಡಾ. ಹೆಚ್. ಸಿ ಮಹದೇವಪ್ಪ ಸೂಚಿಸಿದರು.
ಮೈಸೂರು ಅರಮನೆ ಮಂಡಳಿ ಆವರಣದಲ್ಲಿ ಹಮ್ಮಿಕೊಂಡಿದ್ದ ದಸರಾ ಉಪ ಸಮಿತಿಗಳ ಸಭೆಯಲ್ಲಿ ಸಚಿವರು ಮಾತನಾಡಿದರು.
ಈ ಬಾರಿ ಅತ್ಯಂತ ಸರಳವೂ ಹಾಗೂ ಅದ್ದೂರಿಯೂ ಅಲ್ಲದ ಸಾಂಪ್ರದಾಯಿಕ ದಸರಾವನ್ನು ಆಚರಿಸಲಾಗುತ್ತಿದೆ, ಸಾಂಪ್ರದಾಯಿಕ ದಸರಾ ಆಚರಣೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಕ್ರಮಬದ್ಧವಾಗಿ ಆಯೋಜಿಸಿ ಎಂದು ತಿಳಿಸಿದರು.
ಈಗಾಗಲೇ 18 ವಿವಿಧ ದಸರಾ ಉಪ ಸಮಿತಿಗಳನ್ನು ರಚಿಸಲಾಗಿದ್ದು, ಈ ಬಾರಿ ಹಿಂದಿನ ಅರಮನೆಯ ವೈಭವವನ್ನು ಮರಳಿ ತರುವ ನಿಟ್ಟಿನಲ್ಲಿ 250 (ಸೆರಮೊನಿ ಡ್ರೆಸ್) ಸಮವಸ್ತ್ರಗಳಿಗಾಗಿ ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.
ಜಿಲ್ಲಾಮಟ್ಟದಲ್ಲಿ ರೈತ ದಸರಾವನ್ನು ಆಯೋಜಿಸಿ. ರೈತ ದಸರಾದಲ್ಲಿ ರೈತರಿಗೆ ಉಪಯೋಗವಾಗುವ ಮಣ್ಣಿನ ಫಲವತ್ತತೆ, ಮಿಶ್ರ ಬೆಳೆ, ಪರ್ಯಾಯ ಬೆಳೆ ಹಾಗೂ ಆರ್ಥಿಕ ಅಭಿವೃದ್ಧಿ, ಜಿಡಿಪಿ ಮುಂತಾದ ವಿಚಾರಗಳನ್ನು ಒಳಗೊಂಡ ವಿಚಾರ ಸಂಕಿರಣಗಳನ್ನು ಆಯೋಜಿಸಬೇಕೆಂದು ಸಲಹೆ ನೀಡಿದರು.
ಈ ವೇಳೆ ಸಾಂಸ್ಕೃತಿಕ, ಕ್ರೀಡಾ, ಲಲಿತಕಲಾ, ಕವಿಗೋಷ್ಠಿ, ಗ್ರಾಮೀಣ ದಸರಾ, ಯೋಗಾದಸರಾ ಮಹಿಳಾ ಹಾಗೂ ಮಕ್ಕಳ ದಸರಾ, ಆಹಾರ ಮೇಳ, ಚಲನ ಚಿತ್ರೋತ್ಸವ, ಯುವ ಸಂಭ್ರಮ ಹಾಗೂ ಯುವ ದಸರಾ ಸೇರಿದಂತೆ ವಿವಿಧ ದಸರಾ ಉಪ ಸಮಿತಿಗಳ ಅಧಿಕಾರಿಗಳು ಸದಸ್ಯರೊಂದಿಗೆ ಸಚಿವರು ಚರ್ಚಿಸಿದರು.
ನಂತರ ದಸರಾ ಸಾಂಸ್ಕೃತಿಕ ಉಪಸಮಿತಿಯ ವತಿಯಿಂದ ಪೋಸ್ಟರ್ ಬಿಡುಗಡೆ ಹಾಗೂ ದಸರಾ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು.
ಸಭೆಯಲ್ಲಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ, ಕೆಡಿಪಿ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ,ಅಪರ ಮುಖ್ಯ ಕಾರ್ಯದರ್ಶಿ ಮಂಜುಳಾ, ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ ಗಾಯತ್ರಿ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.