ಯುನೈಟೆಡ್ ಕಿಂಗ್ಡಮ್: ಲಕನ್ನಡ ಬಳಗ, ಯುನೈಟೆಡ್ ಕಿಂಗ್ಡಂ ತನ್ನ 40 ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಅದ್ಧೂರಿಯಾಗಿ ಆಚರಿಸಿತು.
ಕಾರ್ಯಕ್ರಮದಲ್ಲಿ ಯುಕೆ ಮತ್ತು ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿದ ಕನ್ನಡಿಗರು ಭಾಗವಹಿಸಿದ್ದರು.
ಮೈಸೂರಿನ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕನ್ನಡದ ಹೆಸರಾಂತ ಲೇಖಕರು ಮತ್ತು ಸ್ಥಳೀಯ ಪ್ರತಿಭೆಗಳ ಕೊಡುಗೆಗಳನ್ನು ಒಳಗೊಂಡ ವಿಶೇಷ ಸ್ಮರಣಿಕೆ “ಸಂಭ್ರಮ”ವನ್ನು ಅನಾವರಣಗೊಳಿಸಿದರು.
1939ರಲ್ಲಿ ಲಂಡನ್ನಲ್ಲಿ ದಸರಾ ಆಚರಣೆಗಾಗಿ ಅಂದಿನ ರಾಜಕುಮಾರ ಅವರು ಮಾಡಿದ ಕನ್ನಡ ಭಾಷಣವನ್ನು ನೆನಪಿಸಿಕೊಂಡ ಅವರು, ಕರ್ನಾಟಕದ ಶ್ರೀಮಂತ ಪರಂಪರೆ, ಬಸವ ತತ್ವ ಮತ್ತು ವಿವಿಧ ಕ್ಷೇತ್ರಗಳಿಗೆ ರಾಜ್ಯದ ಮಹತ್ವದ ಕೊಡುಗೆಗಳನ್ನು ಸ್ಮರಿಸಿದರು.
ಸ್ವಾಮಿ ಜಪಾನಂದಜಿಯವರು ಸಾಂಸ್ಕೃತಿಕ ಗುರುತಿನ ಆಧ್ಯಾತ್ಮಿಕ ಅಂಶದ ಮೇಲೆ ಮಾತನಾಡಿದರು. ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ನಡುವಿನ ಆಳವಾದ ಸಂಪರ್ಕದ ಕುರಿತು ತಿಳಿಸಿಕೊಟ್ಟರು.
ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದವರ ಮಧುರವಾದ ಸಂಗೀತ ಸಭಿಕರನ್ನು ಮಂತ್ರಮುಗ್ಧಗೊಳಿಸಿತು.
ಯುಕೆ ಕನ್ನಡಿಗರು ಸಾಂಪ್ರದಾಯಿಕ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಪ್ರದರ್ಶನ ಮಾಡಿದರು.
ಬಾರಿಸು ಕನ್ನಡ ಡಿಂಡಿಮವ ಶೀರ್ಷಿಕೆಯ ಆಕರ್ಷಕ ನೃತ್ಯ ನಾಟಕವು ಪ್ರೇಕ್ಷಕರನ್ನು ಕರ್ನಾಟಕದ ಕಲೆ, ಸಂಸ್ಕೃತಿ ಮತ್ತು ಶತಮಾನಗಳ ಐತಿಹಾಸಿಕ ಪಯಣಕ್ಕೆ ಕರೆದೊಯ್ಯಿತು.
‘ಕನ್ನಡ ಕಲಿ’ ಕಾರ್ಯಕ್ರಮದ ಮೂಲಕ ಭಾಷೆಯನ್ನು ಕಲಿಸುವ ಮತ್ತು ಉಳಿಸುವಲ್ಲಿ ಕನ್ನಡಿಗರು ಮಾಡುತ್ತಿರುವ ಪ್ರಯತ್ನವನ್ನು ಶ್ಲಾಘಿಸಲಾಯಿತು.
ಯುವ ಪ್ರತಿಭೆಗಳು ಕಿರು ನಾಟಕಗಳು ಮತ್ತು ಹಾಡುಗಳೊಂದಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು.
ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರು ಸಾಮರ್ಥ್ಯ ಮತ್ತು ಮನಸ್ಸಿನ ಶಕ್ತಿಯ ಮೇಲಿನ ನಂಬಿಕೆಯ ಮಹತ್ವ ಕುರಿತು ಮಾತನಾಡಿದರು.
ಎರಡನೇ ದಿನದ ಮನರಂಜನಾ ಕಾರ್ಯಕ್ರಮದಲ್ಲಿ ಯಾರ್ಕ್ಷೈರ್ ಕನ್ನಡ ಬಳಗದ ಗಾಯನ ತಂಡ ನಿತ್ಯೋತ್ಸವ ಮತ್ತು ಅಪಾರ ಕೀರ್ತಿಯೊಂದಿಗೆ ಗಾನಸುಧೆ ಹರಿಸಿದರು.
ಗುರುಪ್ರಸಾದ್ ಪಟ್ವಾಲ್ ಅವರ ನೇತೃತ್ವದಲ್ಲಿ ಸ್ಥಳೀಯವಾಗಿ ತರಬೇತಿ ಪಡೆದ ತಂಡದಿಂದ ‘ಪಂಚವಟಿ’ ಯಕ್ಷಗಾನ ಪ್ರದರ್ಶನವು ಕನ್ನಡ ಜಾನಪದ, ಸಂಪ್ರದಾಯಗಳ ವೈವಿಧ್ಯತೆ ಮತ್ತು ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಿತು.
ಯುಕೆ ಕನ್ನಡ ಬಳಗದ ಅಧ್ಯಕ್ಷೆ ಸುಮನಾ ಗಿರೀಶ್, ಉಪಾಧ್ಯಕ್ಷೆ ಸ್ನೇಹಾ ಕುಲಕರ್ಣಿ, ಕಾರ್ಯದರ್ಶಿ ಮಧುಸೂಧನ್, ಖಜಾಂಚಿ ರಶ್ಮಿ ಮಂಜುನಾಥ್, ಸಾಂಸ್ಕೃತಿಕ ಕಾರ್ಯದರ್ಶಿ ವೃತಾ ಚಿಟಗುಪ್ಪಿ, ಯುವ ಕಾರ್ಯದರ್ಶಿ ವಿದ್ಯಾರಾಣಿ, ಕಾರ್ಯಕಾರಿ ಸಮಿತಿ ಸದಸ್ಯರಾದ ವ್ರತ ಚಿಗಟೇರಿ ಚಂದ್ರಪ್ಪ, ಆಶೀರ್ವಾದ್ ಮೆರ್ವೆ, ರಾಜೀವ್ ಮೇಟ್ರಿ, ಪ್ರವೀಣ್ ತಾಯಪ್ಪ ಕನ್ನಡ ದಿನ ಪತ್ರಿಕೆಗಳ ಸಂಪಾದಕರಾದ ವಿಶ್ವೇಶ್ವರ ಭಟ್ ಮತ್ತು ರವಿ ಹೆಗಡೆ ಭಾಗವಹಿಸಿದ್ದರು.