ಬೆಂಗಳೂರು: ಬೆಂಗಳೂರು ಮಹಾನಗರಕ್ಕೆ ಶನಿವಾರ ಕರಾಳ ದಿನವಾಗಿ ಪರಿಣಮಿಸಿದೆ.
ಇದುವರೆಗೆ ಸಾಮಾನ್ಯವಾಗಿ ಚೆನ್ನೈನಲ್ಲಿ ಪಟಾಕಿ ದುರಂತ ಸಂಭವಿಸುತ್ತಿತ್ತು ಆದರೆ ಶನಿವಾರ ಬೆಂಗಳೂರಿನಲ್ಲಿ ನಿಜಕ್ಕೂ ಘನ ಘೋರ ದುರಂತ ನಡೆದು ಹೋಗಿದೆ.
ಬೆಂಗಳೂರು ಸಮೀಪದ ಆನೇಕಲ್ ತಾಲೂಕು ಅತ್ತಿಬೆಲೆಯಲ್ಲಿ ಪಟಾಕಿ ಸಿಡಿತದಿಂದ 11 ಮಂದಿ ಮೃತಪಟ್ಟಿದ್ದಾರೆ.
ಶನಿವಾರ ಮಧ್ಯಾಹ್ನ ಪಟಾಕಿ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಮೂವರು ಗಂಭೀರವಾಗಿ ಗಾಯಗೊಂಡು, 11 ಮಂದಿ ನಾಪತ್ತೆಯಾಗಿದ್ದರು.
ಆದರೆ, ನಾಪತ್ತೆಯಾಗಿದ್ದ 11 ಕಾರ್ಮಿಕರು ಸಜೀವ ದಹನವಾಗಿದ್ದು, ಮೃತದೇಹಗಳನ್ನು ಹೊರಗೆ ತೆಗೆಯಲಾಗುತ್ತಿದೆ.
ದೀಪಾವಳಿ ಹಬ್ಬಕ್ಕಾಗಿ ಮಳಿಗೆಯಲ್ಲಿ ಹೆಚ್ಚು ಪಟಾಕಿಗಳನ್ನು ಶೇಖರಣೆ ಮಾಡಲಾಗಿತ್ತು. ಆದರೆ, ಏಕಾಏಕಿ ಪಟಾಕಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡು ದುರಂತ ಸಂಭವಿಸಿದೆ.
ಮಳಿಗೆಯಲ್ಲಿ 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನವೀನ್ ಎಂಬುವವರ ಪಟಾಕಿ ಮಳಿಗೆ ಇದಾಗಿದ್ದು, ಪಟಾಕಿ ಬಾಕ್ಸ್‌ಗಳನ್ನು ತಂದು ಲಾರಿಯಿಂದ ಅನ್‌ಲೋಡ್ ಮಾಡುವಾಗ ಈ ಅವಘಡ ಸಂಭವಿಸಿದೆ.
ಮಳಿಗೆ ಪಕ್ಕದಲ್ಲಿಯೇ ಇದ್ದ ಗೋದಾಮಿಗೂ ಬೆಂಕಿ ತಗುಲಿದೆ. ಅಕ್ಕ-ಪಕ್ಕದಲ್ಲಿದ್ದ ನಾಲ್ಕೈದು ಅಂಗಡಿಗಳು, ಒಂದು ಕ್ಯಾಂಟರ್ ಸೇರಿದಂತೆ ನಾಲ್ಕೈದು ವಾಹನಗಳು ಕೂಡಾ ಸುಟ್ಟು ಭಸ್ಮವಾಗಿವೆ.
ಹೆದ್ದಾರಿ ಪಕ್ಕದಲ್ಲಿಯೇ ಪಟಾಕಿ ಮಳಿಗೆ ಇರುವುದರಿಂದ ನೂರಾರು ಜನರು ಜಮಾಯಿಸಿದ್ದರು. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಸಾಹಸ ಪಟ್ಟಿದ್ದಾರೆ.
ಪಟಾಕಿ ಮಳಿಗೆಯಲ್ಲಿ ಬೆಂಕಿ ತೀವ್ರತೆ ಹೆಚ್ಚಾಗುತ್ತಿದ್ದು, ಸಹಾಯಕ್ಕೆ ತಮಿಳುನಾಡು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದಾರೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಸ್ಥಳೀಯ ತಹಸೀಲ್ದಾರ್ ಶಿವಪ್ಪ ಲಮಾಣಿ, ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ನಾಗೇಶ್ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಶ್ರಮಿಸಿದರು.