ಸಿನಿಮಾ ರಂಗ ಮಾದರಿಯಾಗಬೇಕು -ಸಚಿವ ಬಿ.ಸಿ.ಪಾಟೀಲ್

ಮೈಸೂರು: ಸಿನಿಮಾ ರಂಗ ಮಾದರಿಯಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದಲ್ಲಿ ಸಚಿವರು ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಿನಿಮಾ ರಂಗ ಮಾದರಿಯಾಗಬೇಕೇ ಹೊರತು ಕೆಟ್ಟ ರೀತಿಯಲ್ಲಿ ತೋರಿಸಿಕೊಳ್ಳುವುದರ ಜೊತೆಗೆ ನಾವು ಅದರಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಾಜದ ಮೇಲೆ, ಅಭಿಮಾನಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.
ಡ್ರಗ್ಸ್ ವ್ಯವಸ್ಥೆ ಸಂಪೂರ್ಣ ನಾಶ ಆಗಬೇಕು. ನಾಶವಾಗದಿದ್ದರೆ ಮುಂದಿನ ಜನಾಂಗಕ್ಕೆ ಬಹಳ ದೊಡ್ಡ ಮಾರಕವಾಗಲಿದೆ ಎಂದು ಅವರು ಹೇಳಿದರು.
ಡ್ರಗ್ಸ್ ಜಾಲ ಎಲ್ಲಾ ವರ್ಗದಲ್ಲೂ ಇದೆ. ದೊಡ್ಡ ಶಾಲೆಗಳ ಮುಂದೆ, ಹೈಫೈ ಸ್ಕೂಲ್ ಗಳ ಮುಂದೆ ಇದೆ ಅಂತ ಹೇಳ್ತಿದ್ದಾರೆ.
ಸಿನಿಮಾ ನಟರಾಗಲಿ, ರಾಜಕಾರಣಿಗಳ ಮಕ್ಕಳಾಗಲಿ, ವ್ಯಾಪಾರಸ್ಥರಾಗಲಿ, ಅಧಿಕಾರಿ ವರ್ಗ ಆಗಲಿ ಯಾರೂ ಇಂತಹ ದುಶ್ಚಟಗಳ ವ್ಯಸನಗಳಿಗೆ ತುತ್ತಾಗಿರ್ತಾರೆ. ಈ ದಂಧೆಯಲ್ಲಿ ಯಾರೇ ಇರಲಿ, ಎಷ್ಟೇ ದೊಡ್ಡವರಿರಲಿ ಯಾವ ಮುಲಾಜಿಲ್ಲದೆ ಕ್ರಮ ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.
ನಟರಾದರೆ ಬಿಡಬೇಕು, ನಟಿಯರಾದರೆ ಬಿಡಬೇಕು, ಯಾವ ರಾಜಕಾರಣಿ ಮಕ್ಕಳಾದರೆ ಬಿಡಬೇಕು ಎನ್ನುವದೇನಿಲ್ಲ.
ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲೇ ಬೇಕು ಎಂದು ಸಚಿವರು ತಿಳಿಸಿದರು.
ಚಿತ್ರರಂಗದಲ್ಲಿ ಡ್ರಗ್ಸ್ ವಿಷಯ ಇದನ್ನು ಈಗಲೇ ಕೇಳ್ತಾ ಇರೋದು. ಮೊದಲು ನಾವು ಸಿನಿಮಾ ರಂಗದಲ್ಲಿಯೇ ಇದ್ವಿ. 93ರಿಂದ ಸುಮಾರು 20 ವರ್ಷಗಳು ಅಂದರೆ 16ರ ವರೆಗೂ ನಾನು ರಾಜಕೀಯಕ್ಕೆ ಬಂದ ಮೇಲೂ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೆ. ಆಗ ಇದನ್ನು ಕೇಳಿರಲಿಲ್ಲ. ಈಗ ಇದು ಸ್ಟಾರ್ಟ್ ಆಗಿದೆ. ಡ್ರಗ್ಸ್ ಸಿನಿಮಾರಂಗದಲ್ಲಿ ಬಂದಿದೆ ಎನ್ನುವುದು ಬಹಳ ದುರದೃಷ್ಟಕರ ಎಂದು ಬಿ. ಸಿ. ಪಾಟೀಲ್ ವಿಷಾದ ವ್ಯಕ್ತಪಡಿಸಿದರು.
ಸಿನಿಮಾದವರಿಗೆ ಆದಾಗ ಯಾಕೆ ಜಾಸ್ತಿ ಪ್ರಚಾರ ಆಗತ್ತೆ ಅಂದರೆ ಸಿನಿಮಾದಲ್ಲಿರೋರು ಸೆಲೆಬ್ರಿಟಿಗಳು. ನಾವೆಲ್ಲ ಗಾಜಿನ ಮನೆಯಲ್ಲಿ ಇದ್ದ ಹಾಗೆ. ನಮ್ಮನ್ನು ಇಡೀ ಜಗತ್ತು ನೋಡುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ನಾವೊಂದು ಸಣ್ಣ ತಪ್ಪು ಮಾಡಿದರೂ ಅದು ಪರಿಣಾಮ ಬೀರುತ್ತದೆ. ಅದರ ಜೊತೆ ಸಿನಿಮಾ ನಟ-ನಟಿಯರಿಗೆ ಫಾಲೋವರ್ಸ್ ಇರ್ತಾರೆ, ಅಭಿಮಾನಿಗಳಿರುತ್ತಾರೆ. ಅವರು ನಾಯಕ-ನಾಯಕಿ ಏನಾದರು ಮಾಡಿದರೆ ಅದನ್ನು ಫಾಲೋ ಮಾಡುತ್ತಾರೆ. ಅಂತಹ ವೇಳೆ ಡ್ರಗ್ಸ್ ಗೆ ಬಲಿಯಾದಾಗ ಅದು ಬೇರೆ ರೀತಿಯಲ್ಲಿ ಅಭಿಮಾನಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆಂದರು.