ಮೈಸೂರು: ಷರತ್ತುಗಳನ್ವಯ ಪುರಭವನ ವ್ಯಾಪ್ತಿಯೊಳಗೆ ಮಹಿಷ ದಸರೆಗೆ ಅನುಮತಿ ನೀಡಿದ್ದು ಬೆಟ್ಟಕ್ಕೆ ಪರ- ವಿರೋಧ ಎರಡಕ್ಕೂ ನಿಷೇಧ ವಿಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.
ಜತೆಗೆ ಕಾನೂನು ಮೀರಿ ನಡೆಯುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಲಕ್ಷಾಂತರ ಮಂದಿ ದೇಶ-ವಿದೇಶಗಳಿಂದ ಬರುತ್ತಾರೆ, ಇತ್ತೀಚೆಗೆ ಮಹಿಷ ಉತ್ಸವ ಹಾಗೂ ಧಮ್ಮ ದೀಕ್ಷಾ ಸಮಾರಂಭದ ಹೆಸರಿನಲ್ಲಿ ಮಹಿಷ ದಸರಾ ಆಚರಣಾ ಸಮಿತಿಯವರು ಮನವಿ ಪತ್ರ ಸಲ್ಲಿಸಿ, ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆಗೆ ಅನುಮತಿ ಕೋರಿದ್ದರು ಎಂದು ಹೇಳಿದರು.
ಇದರ ಬೆನ್ನಲ್ಲೇ ಮಹಿಷ ಉತ್ಸವ ಆಚರಣೆ ವಿರೋಧಿಸಿ ಚಲೋ ಚಾಮುಂಡಿ ಬೆಟ್ಟ ಜಾಥಾ ನಡೆಸಲು ಅನುಮತಿ ಕೋರಿ ಕೆಲವರು ಮನವಿ ಪತ್ರ ಸಲ್ಲಿಸಿದ್ದರು. ದಸರಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಇಬ್ಬರಿಗೂ ಅನುಮತಿ ಕೊಟ್ಟಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ಮಹಿಷ ಉತ್ಸವದ ಸಭಾ ಕಾರ್ಯಕ್ರಮಕ್ಕೆ ಷರತ್ತು ವಿಧಿಸಿ ಅನುಮತಿ ನೀಡಲಾಗಿದೆ.
ಪೊಲೀಸ್ ಇಲಾಖೆ ವಿಧಿಸಿರುವ ಷರತ್ತಿನ ಪ್ರಕಾರ ಕಾರ್ಯಕ್ರಮ ನಡೆಸುವಂತೆ ಸೂಚಿಸಲಾಗಿದೆ.
ಮೈಸೂರು ನಗರದಲ್ಲಿ ಗುರುವಾರ ಮಧ್ಯರಾತ್ರಿ 12 ರಿಂದ ಶನಿವಾರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತದೆ.
ಮೈಸೂರಿನ ಟೌನ್ ಹಾಲ್ ಆವರಣದಲ್ಲಿ ಮಹಿಷ ಉತ್ಸವದ ವೇದಿಕೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿದೆ.
ಯಾರು ಪ್ರಚೋದನಾಕಾರಿ ಹೇಳಿಕೆ ನೀಡಬಾರದು, ಶಾಂತಿ ಕದಡಬಾರದು. ಚಾಮುಂಡಿ ಬೆಟ್ಟಕ್ಕೆ ಹೋಗುವ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ಚಾಮುಂಡಿ ಬೆಟ್ಟ ಸೇರಿದಂತೆ ಮೈಸೂರು ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣದ ಮೂಲಕ ವದಂತಿಗಳನ್ನು ಹರಡುವವರ ವಿರುದ್ಧ ನಿಗಾ ವಹಿಸಲಾಗಿದೆ ಎಂದು ರಮೇಶ್ ಬಾನೋತ್ ತಿಳಿಸಿದರು.