ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡನಂತೆ: ಡಿಸಿಎಂ ಗೆ ಎಚ್ ಡಿಕೆ ಟಾಂಗ್

ಬೆಂಗಳೂರು: ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡನಂತೆ, ಕಳ್ಳನ ಮನಸ್ಸು ಹುಳ್ಳಗೆ ಈ ಎಲ್ಲಾ ಗಾದೆಮಾತುಗಳು ಯಾರಿಗೆ ಅನ್ವಯ ಆಗುತ್ತವೋ ಇಲ್ಲವೋ ಗೊತ್ತಿಲ್ಲ ಆದರೆ ಡಿಕೆ ಸಹೋದರರಿಗಂತೂ ಕರಾರುವಕ್ಕಾಗಿ ಅನ್ವಯಿಸುತ್ತವೆ ಎಂದು ಮಾಜಿ ಸಿಎಂ ಎಚ್ ಡಿ.ಕುಮಾರಸ್ವಾಮಿ ಟಾಂಗ್‌ ನೀಡಿದ್ದಾರೆ.

ರಾಜ್ಯ ಕಾಂಗ್ರೆಸ್‌ ಸರಕಾರ ಪರ್ಸಂಟೇಜ್ ಪಟಾಲಂ ಎಂದು ಚಾಟಿ ಬೀಸಿರುವ ಎಚ್ ಡಿಕೆ, ಕುಮಾರಸ್ವಾಮಿ ಅವರೇನು ಆದಾಯ ತೆರಿಗೆ ಇಲಾಖೆಯ ಪ್ರತಿನಿಧಿಯೇ ಎಂದು ಡಿ.ಕೆ ಬ್ರದರ್ಸ್ ಹೇಳಿರುವುದಕ್ಕೆ ಹೀಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕುಮಾರಸ್ವಾಮಿ ಅವರು ಆದಾಯ ತೆರಿಗೆ ಇಲಾಖೆಯ ಪ್ರತಿನಿಧಿಯೇನೂ ಅಲ್ಲ, ಡಿ.ಕೆ.ಶಿವಕುಮಾರ್ ಅವರದು ಹತಾಶೆಯ ಹಳಹಳಿಕೆಯಷ್ಟೇ ಎಂದಿದ್ದಾರೆ.

ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ ಇಡುಗಂಟು ಡಿಕೆಶಿ ಅವರದ್ದು ಎಂದು ನಾನು ಹೇಳಿದ್ದೇನೆಯೇ, ನಗದು ಅಭಿವೃದ್ಧಿ ಇಲಾಖೆ ಎಂದರೆ ಅವರದ್ದೇನಾ, ಅವರು ತಿಹಾರ್‌ ಜೈಲಿನ ವಿಷಯವನ್ನೂ ಪ್ರಸ್ತಾಪ ಮಾಡಿದ್ದಾರೆ, ಸರಿ. ಆದರೆ, ತಿಹಾರಿಗೆ ಹೋಗುವ ಭಯ, ಗ್ಯಾರಂಟಿ ಅವರಿಗೇ ಇದೆ ಎನ್ನುವುದು ನನ್ನ ಸ್ಪಷ್ಟ ಅನುಮಾನ ಎಂದು ಕಾಲೆಳೆದಿದ್ದಾರೆ.

40% ಕಮೀಷನ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಇವರಲ್ಲವೇ ಆದರೆ, ಇವರ ಪರ್ಸಂಟೇಜ್‌ ಬಗ್ಗೆ ಹೇಳಿದರೆ ಕೋಪ ಬರುತ್ತದೆ. ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ ಆ ಕಪ್ಪು ಹಣ ಯಾರದ್ದು ಆ ಗುತ್ತಿಗೆದಾರ ಯಾರ ಪರಮಾಪ್ತ ಎನ್ನುವುದು ಜಗಜ್ಜಾಹೀರು. ಹೀಗಿದ್ದ ಮೇಲೆ ಸತ್ಯ ಮುಚ್ಚಿಟ್ಟರೆ ಶಿವ ಮೆಚ್ಟುತ್ತಾನೆಯೇ ಎಂದು ಡಿಸಿಎಂ ಗೆ ಎಚ್ ಡಿ ಕೆ ಟಾಂಗ್ ನೀಡಿದ್ದಾರೆ.

ಮಾತೆತ್ತಿದರೆ ತನಿಖೆ, ಆಯೋಗ ಎಂದು ಜಪಿಸುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಈಗ ಗುತ್ತಿಗೆದಾರರ ಮನೆಗಳಲ್ಲಿ ಕಂತೆಕಂತೆಯಾಗಿ ಸಿಕ್ಕಿಬಿದ್ದಿರುವ ಕನಕ ಮಹಾಲಕ್ಷ್ಮೀ ಬಗ್ಗೆ ಸತ್ಯ ಹೇಳಲಿ ಎಂದು ಆಗ್ರಹಿಸಿದ್ದಾರೆ.