ಮೈಸೂರು: ಮೌಢ್ಯ,ಕಂದಾಚಾರದಿಂದ
ಸಮಾಜದ ಹಿನ್ನಡೆಯಾಗುತ್ತದೆ, ವೈಚಾರಿಕ, ವೈಜ್ಞಾನಿಕ ಚಿಂತನೆಗೆ ಶಿಕ್ಷಣ ಅಗತ್ಯ, ಶಿಕ್ಷಣ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಾಧನವಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಯುವರಾಜ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಏರ್ಪಡಿಸಿದ್ದ 20ನೆ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ಪಾಲ್ಗೊಂಡು ಸಿಎಂ ಮಾತನಾಡಿದರು.
ಜ್ಞಾನ ವಿಕಾಸವಾಗಲು ಶಿಕ್ಷಣ ಅಗತ್ಯ. ನಾವೂ ಅನಕ್ಷರಸ್ಥರಂತೆ ನಡೆದುಕೊಳ್ಳುವುದಾದರೆ ಶಿಕ್ಷಣದ ಅಗತ್ಯವೇ ಇಲ್ಲ. ಸಮಾಜದಲ್ಲಿ ಜಾತಿ ವ್ಯವಸ್ಥೆಯಿದೆ. ಜಾತಿಯಿಂದಲೇ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯಿದೆ.
ಸಮಾಜದಲ್ಲಿ ಅವಕಾಶಗಳಿಂದ, ನ್ಯಾಯದಿಂದ ವಂಚಿತರಾಗಿದ್ದರೆ, ಅಂತವರ ಪರಿಸ್ಥಿತಿಯನ್ನು ಸುಧಾರಿಸಬೇಕು ಶಿಕ್ಷಿತರು ಸಮಾಜದಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಕಲಹದ
ಜಾತಿವಿರೋಧಿ ಎಂಬ ಆರೋಪ ನನ್ನ ಮೇಲಿದೆ. ಆದರೆ ನಾನು ಯಾವ ಜಾತಿಯ ವಿರೋಧಿಯೂ ಅಲ್ಲ. ನಾನು ಸಾಮಾಜಿಕ ನ್ಯಾಯದ ಪರವಾಗಿದ್ದು, ಮನುಷ್ಯ ಜಾತಿಯ ಪರವಾಗಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅನನ್ಯ
ಹಳೆಯ ವಿದ್ಯಾರ್ಥಿ ಸಂಘದ 20ನೇ ವರ್ಷದ ಸಮಾರಂಭಕ್ಕೆ ನಾನು ಹಳೆಯ ವಿದ್ಯಾರ್ಥಿಯಾಗಿ ಭಾಗವಹಿಸಿದ್ದೇನೆ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯ ಪ್ರಾರಂಭವಾಗಿ ಶತಮಾನ ಕಳೆದಿದೆ. ಶಿಕ್ಷಣ ಸಂಸ್ಥೆ, ಕೈಗಾರಿಕೆ, ಕಲೆ, ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರ ಹೀಗೆ ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣರಾಗಿದ್ದಾರೆ.
ಆ ಕಾಲದಲ್ಲಿ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್, ಸರ್.ಎಂ.ವಿಶ್ವೇಶ್ವರಯ್ಯ ಬಹಳ ಪ್ರಗತಿಪರರಾಗಿದ್ದರು. ಕೆಆರ್ ಎಸ್ ಜಲಾಶಯ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂವಿ ಅವರ ಕನಸಿನ ಯೋಜನೆ ಎಂದು ಸಿಎಂ ತಿಳಿಸಿದರು.
ಯುವರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ, ಮುಖ್ಯಮಂತ್ರಿಯಾಗುವ ಕಲ್ಪನೆಯೂ ಇರಲಿಲ್ಲ ನಾನು ವೈದ್ಯನಾಗಬೇಕೆಂಬ ಆಸೆ ತಂದೆಯವರದಾಗಿತ್ತು.
ಆದ್ದರಿಂದ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿದೆ,1968 ರಲ್ಲಿ ಬಿಎಸ್ ಸಿ ಪದವಿ ಪಡೆದು, ನಾಲ್ಕು ವರ್ಷಗಳ ಕಾಲ ಯುವರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದೇನೆ ಎಂದು ತಮ್ಮ ಕಾಲೇಜಿನ ದಿನಗಳ ನೆನಪುಗಳನ್ನು ಸಿದ್ದರಾಮಯ್ಯ ಹಂಚಿಕೊಂಡರು.