(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಪೊಲೀಸ್ ಗಣಪ ಎಂದೆ ಹೆಸರುವಾಸಿಯಾಗಿರುವ ಚಾಮರಾಜ ನಗರದ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿ ವತಿಯಿಂದ ಪ್ರತಿಷ್ಟಾಪನೆ ಮಾಡಲಾಗಿದ್ದ 61ನೇ ವರ್ಷದ ಸುದರ್ಶನ ಗಣಪತಿ ವಿಸರ್ಜನಾ ಮಹೋತ್ಸವ ಸೋಮವಾರ ಅದ್ದೂರಿಯಾಗಿ ನೆರವೇರಿತು.
ಗಣಪತಿ ವಿಸರ್ಜನ ಮಹೊತ್ಸವದ ಮೆರವಣಿಗೆಯಲ್ಲಿ ನಂದಿ ಧ್ವಜ, ಗೊರವರ ಕುಣಿತ, ವೀರಭದ್ರ ಕುಣಿತ, ಗಾರುಡಿ ಗೊಂಬೆ, ನಾಸಿಕ್ ಡೋಲು ಕುಣಿತ, ಚಂಡೆ ಮದ್ದಳೆ, ಡೋಲು ,ಮಹಿಳಾ ವೀರಗಾಸೆ, ಸೇರಿದಂತೆ ಹಲವು ಕಲಾ ತಂಡಗಳು ಭಾಗವಹಿಸಿದ್ದವು.
ಮೆರವಣಿಗೆಯು ಖಡಕ್ ಪುರ ಮೊಹಲ್ಲಾ ಬೀದಿ, ಅಂಬೇಡ್ಕರ್ ಬೀದಿ, ಡೀವಿಯಷನ್ ರಸ್ತೆ, ದೇವಾಂಗ ಬೀದಿ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ ಸಂತೇಮರಳ್ಳಿ ವೃತ್ತ, ಆದಿಶಕ್ತಿ ದೇವಸ್ಥಾನ, ಬಣಜಿಗರ ಬೀದಿ, ಭ್ರಮರಾಂಬ ಎರಡನೇ ಕ್ರಾಸ್, ಕುರುಬರ ಬೀದಿ, ಹಳ್ಳದ ಬೀದಿ, ಅಗ್ರಹಾರ ಬೀದಿ, ನಗರಸಭಾ ಕಚೇರಿ ರಸ್ತೆ, ಚಮಾಲ್ ಬೀದಿ, ವೀರಭದ್ರಸ್ವಾಮಿ ದೇವಸ್ಥಾನ ಮೂಲಕ ಹಾದು, ಜೈನರ ಬೀದಿ, ಕೊಳದ ಬೀದಿಯಲ್ಲಿ ಮೆರವಣಿಗೆ ಸಾಗಿ ನಂತರ ದೊಡ್ಡ ಅರಸನ ಕೊಳದಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಲಾಯಿತು
ಪೊಲೀಸ್ ಬಂದೂಬಸ್ತ್:ಗಣಪತಿ ವಿಸರ್ಜನಾ ಮೆರವಣಿಗೆ ಸಾಗುವ ಪ್ರತಿ ಮಾರ್ಗದಲ್ಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೊ ಅವರ ನೇತೃತ್ವದಲ್ಲಿ ವ್ಯಾಪಕ ಪೊಲೀಸ್ ಬಂದೂಬಸ್ತ್ ನಿಯೋಜಿಸಲಾಗಿತ್ತು.
ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿ. ಮೆರವಣಿಗೆ ಸಾಗುವ ಆಯಕಟ್ಟಿನ ಸ್ಥಳಗಳಲ್ಲಿ ಭಾನುವಾರ ಸಂಜೆಯಿಂದಲೇ ಪೊಲೀಸರನ್ನು ನಿಯೋಜಿಸಲಾಗಿತ್ತು.
400 ಸಿಬ್ಬಂದಿ, 50 ಅಧಿಕಾರಿಗಳು, ಐದು ಕೆಎಸ್ಆರ್ಪಿ ತುಕಡಿಗಳು, ಮೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.
12 ಕಡೆಗಳಲ್ಲಿ ವಿಡಿಯೊ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿತ್ತು. ಒಂದು ಡ್ರೋಣ್ ಕ್ಯಾಮೆರಾದಿಂದ ಇಡೀ ಮೆರವಣಿಗೆ ಚಿತ್ರೀಕರಣ ಮಾಡಿಸಿದ್ದರು. ಪೂರ್ವ ಯೋಜಿತವಾಗಿ ಮೂರು ಸಲ ಪಥಸಂಚಲನ ನಡೆಸಲಾಗಿತ್ತು.
ಜಿಲ್ಲಾಡಳಿತದಿಂದಲೂ ಜವಬ್ದಾರಿ: ಶ್ರೀ ವಿದ್ಯಾಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಏಳು ಸೆಕ್ಟರ್ಗಳನ್ನಾಗಿ ವಿಂಗಡಿಸಿ, ಕೊಳ್ಳೇಗಾಲ ಉಪ ವಿಭಾಗದ ಉಪ ವಿಭಾಗಾಧಿಕಾರಿಗಳು, ಮತ್ತು ಚಾಮರಾಜನಗರ ತಾಲ್ಲೂಕು ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿಗಳು ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಕಾರ್ಯನಿರ್ವಹಿಸಲು ಸೂಕ್ತ ನಿರ್ದೇಶನ ನೀಡಿದ್ದರು.
ಜಿಲ್ಲೆಯ ಐದು ತಾಲ್ಲೋಕಿನ ತಹಶಿಲ್ದಾರರನ್ನ ಪ್ರಮುಖ ಬೀದಿಗಳಿಗೆ ನಿಯೋಜಿಸಿ ಇದೆ ಮೊದಲ ಬಾರಿಗೆ ಉಸ್ತುವರಿ ನೀಡಿದ್ದರು.
ವಿದ್ಯಾಗಣಪತಿ ಮೂರ್ತಿ ವಿಸರ್ಜನಾ ಕಾರ್ಯಕ್ರಮದ ಮೆರವಣಿಗೆ ಮೇಗಲ ಉಪ್ಪಾರ ಬೀದಿ ಸಮೀಪ ಹೋಗುತ್ತಿದ್ದಾಗ ಯುವಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಮಾತಿನ ಚಕಮಕಿಯಿಂದ ತಳ್ಳಾಟ ನೂಕಾಟದ ನಡುವೆ ಪೂಜೆ ನೋಡಲು ನಿಂತಿದ್ದ ಸರೋಜಮ್ಮ,ದ್ರಾಕ್ಷಾಯಿಣಿ, ಜಯಮ್ಮ ಮುತ್ತಮ್ಮ, ಬಾಲಕಿಯರಾದ ಆದ್ಯ,ಪ್ರಾರ್ಥನಾ ಎಂಬುವರಿಗೆ ಗಾಯಗಳಾಗಿದ್ದು ಪಟ್ಟಣ ಪೊಲೀಸರು ಅವರದೆ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿಸಿದರು.