ಕೊರೊನಾ ವಾರಿಯರ್ಸ್‍ರಿಂದ ಮೈಸೂರು ದಸರಾ ಉದ್ಘಾಟನೆ

ಬೆಂಗಳೂರು: ಈ ಬಾರಿಯ ಮೈಸೂರು ದಸರಾ ಉದ್ಘಾಟನೆಯನ್ನು ಕೊರೊನಾ ವಾರಿಯರ್ಸ್ ನೆರವೇರಿಸಲಿದ್ದಾರೆ.
ಮೈಸೂರು ದಸರಾ ಆಚರಣೆ ಹಾಗೂ ಜಂಬೂ ಸವಾರಿ ಕುರಿತು ನಗರದಲ್ಲಿ ದಸರಾ ಉನ್ನತ ಮಟ್ಟದ ಸಭೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮಂಗಳವಾರ ನಡೆಯಿತು.
ಸಭೆಯಲ್ಲಿ ಮೈಸೂರು ದಸರಾವನ್ನು ಈ ಬಾರಿ ಕೊರೊನಾ ವಾರಿಯರ್ಸ್ ಉದ್ಘಾಟಿಸಲು ತೀರ್ಮಾನ ಕೈಗೊಳ್ಳಲಾಯಿತು.
ಹಾಗೆಯೇ ದಸರಾ ಆಚರಣೆ ಕುರಿತು ಕೆಲ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.
ಕೊರೊನಾ ಹರಡುವ ಭೀತಿ ಇರುವುದರಿಂದ ಈ ಬಾರಿಯ ದಸರಾ ಮಹೋತ್ಸವವನ್ನು ಚಾಮುಂಡಿ ಬೆಟ್ಟ ಹಾಗೂ ಮೈಸೂರು ಅರಮನೆಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಪ್ರತೀ ವರ್ಷದಂತೆ ಅರಮನೆಯಲ್ಲಿ ಸಂಪ್ರದಾಯದ ಕಾರ್ಯಕ್ರಮಗಳು ಇರುತ್ತವೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸದಿರಲು ತೀರ್ಮಾನಿಸಲಾಗಿದೆ.
ಈ ಬಾರಿಯ ದಸರಾ ಮಹೋತ್ಸವದಲ್ಲಿ ಯುವ ದಸರಾ, ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ ಹಾಗೂ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸದಿರಲು ಸಭೆಯಲ್ಲಿ ನಿರ್ಣಯಿಸಲಾಗಿದೆ.
ಈ ಸಾರಿ ಜಂಬೂ ಸವಾರಿ ಅರಮನೆ ಒಳಗೆ ಮಾತ್ರ ನಡೆಯಲಿದೆ.
ದಸರಾಗೆ 10 ಕೋಟಿ ರೂ.ಗಳನ್ನು ಸರಕಾರ ಬಿಡುಗಡೆ ಮಾಡಲಿದೆ.