140 ಕೋಟಿ ವೆಚ್ಚದಲ್ಲಿ ಮಹಾರಾಣಿ ಕಲಾ ಮತ್ತು ವಿಜ್ಞಾನ ಕಾಲೇಜು ದುರಸ್ತಿ ಕಾಮಗಾರಿ:ಡಾ ಎಂ.ಸಿ. ಸುಧಾಕರ್ ಭರವಸೆ

ಮೈಸೂರು: ಮೈಸೂರಿನ ಮಹಾರಾಣಿ ಕಲಾ ಮತ್ತು ವಿಜ್ಞಾನ ಮಹಿಳಾ ಕಾಲೇಜು ಕಟ್ಟಡ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಉನ್ನತ ಶಿಕ್ಷಣ ಸಚಿವರಾದ ಡಾ ಎಂ.ಸಿ. ಸುಧಾಕರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿನಿಯರ ಕುಂದು ಕೊರತೆ ವಿಚಾರಿಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ ಎಂ.ಸಿ. ಸುಧಾಕರ್, ಇತಿಹಾಸ ಇರುವಂತಹ ಮಹಾರಾಣಿ ಕಾಲೇಜುಗಳಲ್ಲಿ ಕಟ್ಟಡದ ಹಾಗೂ ವಸತಿ ನಿಯಮ ಕೊರತೆ ಕಂಡುಬಂದಿದೆ. ಈಗಾಗಲೇ ಮಹಾರಾಣಿ ಕಲಾ ಕಾಲೇಜಿಗೆ 17 ಕೋಟಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ವಿಜ್ಞಾನ ಕಾಲೇಜು ಐತಿಹಾಸಿಕ ಕಟ್ಟಡವಾಗಿದ್ದು ಸಾಕಷ್ಟು ಸಮಸ್ಯೆ ಇದೆ. ಹಾಗಾಗಿ ಜಿಲ್ಲಾಧಿಕಾರಿ ಹಾಗೂ ಪುರಾತತ್ವ ಇಲಾಖೆ ಜೊತೆ ಮಾತುಕತೆ ನಡೆಸಲಾಗಿದೆ ಐದು ಅಂತಸ್ತಿನ ಮಹಡಿ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.ಪಾರಂಪರಿಕ ಕಟ್ಟಡ ಶೈಲಿಯಲ್ಲಿ ಕಟ್ಟಲಾಗುವುದು ಎಂದು ಹೇಳಿದರು.

ಮಹಾರಾಣಿ ಕಲಾ ಮತ್ತು ವಿಜ್ಞಾನ ಮಹಿಳಾ ಕಾಲೇಜು ಕಟ್ಟಡ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯ‌ ದುರಸ್ತಿ ಕಾಮಗಾರಿಯನ್ನು ಒಟ್ಟು 140 ಕೋಟಿ ವೆಚ್ಚ ದಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದ್ದು ಜನವರಿ ನಂತರ ಕೆಲಸ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮರೀತಿಬ್ಬೆಗೌಡ, ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಗೌಡ ಹಾಗೂ ಅಧಿಕಾರಿಗಳು ಹಾಜರಿದ್ದರು.