ಮೈಸೂರು:ಪುರಭವನದಲ್ಲಿನ ತಳಮಹಡಿ ವಾಹನ ನಿಲ್ದಾಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಸಚಿವರು, ನಗರಕ್ಕೆ ಬರುವ ಪ್ರವಾಸಿಗರು ಹಾಗೂ ಸ್ಥಳೀಯ ಜನರಿಗೆ ತಮ್ಮ ವಾಹನ ಪಾರ್ಕಿಂಗ್ ಮಾಡುವುದೇ ದೊಡ್ಡ ಸಮಸ್ಯೆಯಾಗಿತ್ತು ಎಂದು ತಿಳಿಸಿದರು.
ಪ್ರಸ್ತುತ ವ್ಯವಸ್ಥಿತವಾಗಿ ನಿರ್ಮಿಸಿರುವ ವಾಹನ ನಿಲ್ದಾಣವು ಎಲ್ಲರಿಗೂ ಉಪಯೋಗವಾಗಲಿದ್ದು, ಸುಗಮ ಸಂಚಾರ ಸಾಧ್ಯವಾಗಲಿದೆ ಎಂದು ಹೇಳಿದರು.
ಇಲ್ಲಿನ ನಿಲ್ದಾಣದಲ್ಲಿ ಸುಮಾರು 400 ಕ್ಕೂ ಹೆಚ್ಚ ವಾಹನಗಳನ್ನು ಪಾರ್ಕಿಂಗ್ ಮಾಡಬಹುದು. ಮುಂದಿನ ದಿನಗಳಲ್ಲಿ ಎರಡು ಸಾವಿರ ಸಾಮಾರ್ಥ್ಯದ ಪಾರ್ಕಿಂಗ್ ವ್ಯವಸ್ಥೆ ಮಾಡಿದರೆ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ.
ಜನರು ತಮ್ಮ ವಾಹನವನ್ನು ಇಲ್ಲಿ ಪಾರ್ಕಿಗ್ ಮಾಡಿ ಯಾವುದೇ ಕಿರಿಕಿರಿ ಇಲ್ಲದೆ ನಿರಾಳವಾಗಿ ನಗರವನ್ನು ವೀಕ್ಷಣೆ ಮಾಡಬಹುದು. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ಮೈಸೂರು ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ನಗರ ಪಾಲಿಕೆ ಉತ್ತಮವಾಗಿ ಕೆಲಸ ನಿರ್ವಹಿಸಬೇಕು. ನಗರದಲ್ಲಿ ವಾಯು ಮಾಲಿನ್ಯ ತಪ್ಪಿಸಿ, ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆ ಆಗದಂತೆ ನಿಗಾವಹಿಸಬೇಕು.
ಈ ಕೆಲಸಕ್ಕೆ ಎಲ್ಲಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮಹದೇವಪ್ಪ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಹರೀಶ್ ಗೌಡ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪ, ನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್, ಉಪ ಆಯುಕ್ತ ಜಿ.ಸೋಮಶೇಖರ್, ನಗರ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.