ಪ್ರೊ ಕೆ.ಎಸ್ ಭಗವಾನ್ ವಿರುದ್ಧ ಎಫ್ಐಆರ್ ದಾಖಲು

ಮೈಸೂರು: ಅಂತೂ ಇಂತೂ ಕಡೆಗೂ ಪ್ರೊ. ಕೆಎಸ್ ಭಗವಾನ್ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಅ.13 ರಂದು ಮೈಸೂರಿನ ಪುರಭವದಲ್ಲಿ ನಡೆದ ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಕೆ.ಎಸ್ ಭಗವಾನ್ ಅವರು ಹಿಂದೂ ಧರ್ಮ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ವಿರೋಧಿಸಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದಿಂದ 16 ರಂದು ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವು ಎಂದು ಸುದ್ದಿ ಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಸಿ ಜಿ ಗಂಗಾಧರ್ ತಿಳಿಸಿದರು.

ನಾವು ನೀಡಿದ್ದ ದೂರನ್ನು ಪೊಲೀಸ್ ಇಲಾಖೆಯು ದಾಖಲಿಸುವುದರಲ್ಲಿ ವಿಳಂಬ ಮಾಡಿದ್ದರಿಂದ ನಮ್ಮ ಸಮುದಾಯದ ಮೈಸೂರಿನ ಎಲ್ಲಾ  ಒಕ್ಕಲಿಗ ಸಂಘಟನೆಗಳ ಮುಖಂಡರು ಸೇರಿ 19 ರಂದು ಭಗವಾನ್ ಮೇಲೆ ಶೀಘ್ರ ಎಫ್ಐಆರ್ ಹಾಕಬೇಕೆಂದು ಬೃಹತ್ ಪ್ರತಿಭಟನೆ ಮಾಡಿದೆವು ಎಂದು ಹೇಳಿದರು.

ಅಲ್ಲಿ ನಮ್ಮ ಸಮುದಾಯದ ಮುಖಂಡರು  ಕೂಡಲೇ ಎಫ್ಐಆರ್ ಹಾಕಬೇಕೆಂದು ಪಟ್ಟು ಹಿಡಿಯಲಾಗಿ, ಅಂದು ಪೋಲಿಸ್ ಇಲಾಖೆಯು 48 ಗಂಟೆ ಒಳಗೆ ಭಗವಾನ್ ಮೇಲೆ ಎಫ್ಐಆರ್ ದಾಖಲಿಸುವುದಾಗಿ ಹೇಳಿಕೆ  ನೀಡಿತ್ತು ಹಾಗಾಗಿ ನಾವು ಪ್ರತಿಭಟನೆ ವಾಪಸ್ ತೆಗೆದುಕೊಂಡೆವು ಎಂದು ತಿಳಿಸಿದರು.

ಆ ದಿನ ಪೋಲೀಸ್ ಇಲಾಖೆಯು ಆಶ್ವಾಸನೆ ನೀಡಿದಂತೆ ನಡೆದುಕೊಂಡಿದೆ. ಕೆ ಎಸ್ ಭಗವಾನ್ ವಿರುದ್ಧ ಐಪಿಸಿ ಸೆಕ್ಷನ್ 153 ಅಂಡ್ 153 ಎ ಅಡಿಯಲ್ಲಿ ಎಫ್ ಐ ಆರ್  ದಾಖಲಿಸಿದ್ದಾರೆ ಇದರಿಂದ ನಮಗೆ ಸಂತೋಷವಾಗಿದೆ ಎಂದು ಗಂಗಾಧರ್ ಹೇಳಿದರು.

ಆದರೆ ಇಷ್ಟು ಸಾಲದು ಕೂಡಲೇ ಭಗವಾನ್ ರನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಸಂಘದವರು‌ ಆಗ್ರಹಿಸಿದರು.

ಸರ್ಕಾರ ಈ ಎಫ್ ಐ ಆರ್ ಅನ್ನು ಗಂಭೀರವಾಗಿ ಪರಿಗಣಿಸಿ, ಭಗವಾನ್ ರನ್ನು ತೀವ್ರ ತನಿಖೆಗೆ ಒಳಪಡಿಸಿ, ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯದೇ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ತನಿಖೆ ನಡೆಸಬೇಕೆಂದು‌ ಆಗ್ರಹಿಸಿದರು.

ಇನ್ನು ಮುಂದೆ ಯಾವುದೇ ವ್ಯಕ್ತಿ ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರ ಹಾಗೂ ಪೋಲಿಸ್ ಇಲಾಖೆಗೆ ಮನವಿ ಮಾಡುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ  ಜಿಲ್ಲಾ ಗೌರವಾಧ್ಯಕ್ಷ ಡಾ. ಸಿ ವೈ ಶಿವೇಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಕಾರ್ಯದರ್ಶಿ ಚೇತನ್ ಉಪಸ್ಥಿತರಿದ್ದರು.