ವಿಜೃಂಭಣೆಯಿಂದ ನಡೆದ ಚಾಮುಂಡೇಶ್ವರಿ ರಥೋತ್ಸವ

ಮೈಸೂರು, ಅ. 26-ದಸರಾ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಬೆಳಿಗ್ಗೆ 7.50 ರಿಂದ 8.10ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿಯ ರಥೋತ್ಸವ ನಡೆಯಿತು.
ಚಾಮುಂಡೇಶ್ವರಿ ದೇವಿಯ ರಥೋತ್ಸವ ದೇವಾಲಯದ ಸುತ್ತಲೂ ಸಾಗಿ ಬಂದಿತು.
ದೇವಿಯ ರಥೋತ್ಸವಕ್ಕೆ ರಾಜವಂಶಸ್ಥರದ ಪ್ರಮೋದ ದೇವಿ ಒಡೆಯರ್, ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕ ಕುಮಾರಿ ಒಡೆಯರ್ ರಥೋತ್ಸವಕ್ಕೆ ಚಾಲನೆ ನೀಡಿದರು.
ಮಂಗಳವಾದ್ಯದೊಂದಿಗೆ ತಾಯಿಯ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಇದೇ ಸಂದರ್ಭದಲ್ಲಿ 21 ಬಾರಿ ಸಿಡಿಮುತ್ತು ಸಿಡಿಸಿ ದೇವಿಗೆ ಗೌರವ ಸಮರ್ಪಿಸಲಾಯಿತು.
ಚಾಮುಂಡಿಬೆಟ್ಟದಲ್ಲಿ ನಡೆದ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು. ಮುಂಜಾನೆಯೇ ದೇವಾಲಯದಲ್ಲಿ ತಾಯಿಗೆ ವಿವಿಧ ಅಭಿಷೇಕ ವಿಶೇಷ ಪೂಜೆ ಸಲ್ಲಿಸಲಾಯಿತು.
ನಾಡ ಅಧಿದೇವತೆಗೆ ಹಸಿರು ಬಣ್ಣದ ಸೀರೆಯುಡಿಸಿ ಆಭರಣಗಳನ್ನು ಧರಿಸಲಾಗಿತ್ತು.
ಮೊದಲಿಗೆ ರಥದಲ್ಲಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜಮಾತೆ ಪ್ರಮೋದಾದೇವಿ ಒಡೆಯರ್,ತ್ರಿಷಿಕಾ ಕುಮಾರಿ ಒಡೆಯರ್,ಶಾಸಕ ಜಿಟಿ ದೇವೇಗೌಡ ಅವರು ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸಿದರು.
ಅರಮನೆ ಪೊಲೀಸ್ ತಂಡದಿಂದ ಸಂಗೀತ ವಾದ್ಯ ಮೊಳಗಿತು.
ದೇವಸ್ಥಾನದ ಬಳಿ ಸಿಂಗಾರಗೊಂಡು ನಿಂತಿದ್ದ ರಥವನ್ನು ಭಕ್ತರು ರಥದ ಹಗ್ಗ ಹಿಡಿದು ಎಳೆದು ಪುನೀತರಾದರು.ಇನ್ನೂ ಕೆಲವರು ಹಗ್ಗ ಮುಟ್ಟಿ ನಮಸ್ಕರಿಸಿ, ಚಾಮುಂಡೇಶ್ವರಿ ಗೆ ಜೈ ಎಂದು ಘೋಷಣೆ ಕೂಗಿದರು.