ವೈಭವದಿಂದ ನೆರವೇರಿದ ಚಾಮುಂಡೇಶ್ವರಿ ದೇವಿ ತೆಪ್ಪೋತ್ಸವ

ಮೈಸೂರು: ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿ ತೆಪ್ಪೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.

ಚಾಮುಂಡಿ ಬೆಟ್ಟದಲ್ಲಿ ಶನಿವಾರ ಸಂಜೆ ಚಾಮುಂಡೇಶ್ವರಿ ತೆಪ್ಪೋತ್ಸವ ಬೆಟ್ಟದ ಮೇಲಿರುವ ದೇವಿ ಕೆರೆಯಲ್ಲಿ ನಡೆಯಿತು.

ಪ್ರತಿವರ್ಷ ರಾತ್ರಿ ತೆಪ್ಪೋತ್ಸವ ನಡೆಸಲಾಗುತ್ತಿತ್ತು.
ಈ ಬಾರಿ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾತ್ರಿ ಸಮಯದಲ್ಲಿ ನಡೆಯಬೇಕಿದ್ದ ತೆಪ್ಪೋತ್ಸವ ಸಂಜೆ 5 ಗಂಟೆಗೆ ನೆರವೇರಿಸಲಾಯಿತು.

ಮೊದಲು ದೇವಾಲಯದಲ್ಲಿ ತಾಯಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ‌ ಸಲ್ಲಿಸಿ ತಾಯಿಯನ್ನು ದೇವಿಕೆರೆಗೆ ತರಲಾಯಿತು.

ದೇವಿಕೆರೆಯಲ್ಲಿ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿದ್ದ ತೆಪ್ಪದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಟಾಪಿಸಿ,ಪೂಜೆ ಸಲ್ಲಿಸಿ ನಂತರ ಕೆರೆಯಲ್ಲಿ ಮೂರುಸುತ್ತು ಪ್ರದಕ್ಷಿಣೆ ಬರಲಾಯಿತು.

ಸಾವಿರಾರು‌ ಭಕ್ತರು ತಾಯಿ,ಅಮ್ಮಾ,ಚಾಮುಂಡೇಶ್ವರಿ ಕಾಪಾಡು ದೇವಿಯಲ್ಲಿ ಮೊರೆ ಇಡುತ್ತಿದ್ದುದು ಕಂಡುಬಂದಿತು.

ತೆಪ್ಪೋತ್ಸವದ ನಂತರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದೇವಾಲಯವನ್ನು ಮುಚ್ಚಲಾಯಿತು.

ಚಂದ್ರ ಗ್ರಹಣ ಪೂರ್ಣಗೊಂಡ ನಂತರ ನಾಳೆ ಬೆಳಿಗ್ಗೆ 7.30 ರ ನಂತರ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗುತ್ತದೆ.