ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಕೆಟ್ಟ ಚಟುವಟಿಕೆಗಳು ನಡೆಯುತ್ತಿದ್ದು ನಿಜಕ್ಕೂ ಇಲ್ಲಿನ ಜನ ತಲೆತಗ್ಗಿಸುವಂತೆ ಆಗಿದೆ ಇದಕ್ಕೆ ಉದಾಹರಣೆ ಇಲ್ಲಿದೆ.
ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರಿಗೆ ಸೇರಿದ ಕಟ್ಟಡದಲ್ಲೇ ವೇಶ್ಯಾವಾಟಿಕೆ ಜಾಲ ನಡೆಯುತ್ತಿದ್ದುದು ನಾಗರೀಕರು ಅಸಹ್ಯ ಪಡುವಂತಾಗಿದೆ.
ಮೈಸೂರು- ನರಸೀಪುರ ರಸ್ತೆಯ ಲಲಿತಮಹಲ್ ಬಳಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದರೂ ಆ ನಿವೃತ್ತ ಪೊಲೀಸ್ ಅಧಿಕಾರಿಗೆ ತಿಳಿದಿರಲಿಲ್ಲವೆ ಎಂಬ ಅನುಮಾನ ಕಾಡುತ್ತಿದೆ.
ದಾನಿಯಾ ಫ್ಯಾಮಿಲಿ ಸಲೊನ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನ ಒಡನಾಡಿ ಮತ್ತು ಆಲನಹಳ್ಳಿ ಪೊಲೀಸರು ಪತ್ತೆ ಹಚ್ಚಿದ್ದು,6 ಯುವತಿಯರನ್ನ ರಕ್ಷಿಸಲಾಗಿದೆ.
ಈ ಹಿಂದೆ ಫೋಕ್ಸೋ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಮಹೇಶ್ ಎಂಬಾತ ಇದರ ಮುಖ್ಯ ಕೇಂದ್ರ ಬಿಂದು.
ಅಲ್ಲದೆ ಕಿಂಗ್ ಪಿನ್ ಎಂದು ಹೇಳಲಾದ ಬಾಣಲಿ ಮಹೇಶ್, ಮಧು ಮತ್ತು ಸುಧಾ ರನ್ನ ಪೊಲೀಸರು ಬಂಧಿಸಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ. ರಂಗಸ್ವಾಮಿ ಅವರಿಗೆ ಸೇರಿದ ಮನೆಯಲ್ಲಿ ನಡೆಯುತ್ತಿದ್ದ ದನಿಯಾ ಫ್ಯಾಮಿಲಿ ಸಲೂನ್ ನಲ್ಲಿ ಕಳೆದ ಹಲವಾರು ತಿಂಗಳುಗಳಿಂದ ವೇಶ್ಯವಾಟಿಕೆ ದಂಧೆ ನಡೆಯುತ್ತಿದ್ದರ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ.
ದಾಳಿ ವೇಳೆ ಇಬ್ಬರು ಗಿರಾಕಿಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಿರಾಕಿಯೊಬ್ಬರ ಜೊತೆ ಬಾಣಲಿ ಮಹೇಶ್ ಮಾತನಾಡಿರುವ ಆಡಿಯೋ ತುಣುಕು ಕೂಡಾ ಬಯಲಾಗಿದೆ.
ಇವತ್ತು ರೇಡ್ ಆಗುತ್ತೆ ಅಂತಾ ಮಾಲೀಕರು ಹೇಳಿದ್ದಾರೆ. ಹಾಗಾಗಿ ಸಲೂನ್ ಬಂದ್ ಮಾಡಿದ್ದೇವೆ ಎಂದು ಮಹೇಶ ಮಾತನಾಡಿದ್ದಾನೆ.
ಅಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.