ಮೈಸೂರು ನವೆಂಬರ್ 0೧-ಎಲ್ಲೆಡೆ ಕನ್ನಡದಲ್ಲೇ ವ್ಯವಹರಿಸುವ ಮೂಲಕ ನಮ್ಮ ನೆಲದ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು, ಕನ್ನಡವನ್ನು ಯುವಕರು ಒಲವಿನ ಭಾಷೆಯಾಗಿ ಬಳಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ನಗರದ ವೋವೆಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ 68 ನೆ ಕನ್ನಡ ರಾಜ್ಯೋತ್ಸವವನ್ನು ಸಚಿವರು ಹಾಗೂ ಗಣ್ಯರೊಂದಿಗೆ ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ನೆರವೇರಿಸಿ,ತೆರೆದ ವಾಹನದಲ್ಲಿ ತುಕಡಿಗಳ ಪರಿವೀಕ್ಷಣೆ ಮಾಡಿ ಮಾತನಾಡಿದರು
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಕನ್ನಡ ಲಿಪಿಯು ಹೆಚ್ಚು ಬಳಕೆಯಾಗುತ್ತಿರುವುದು ಸಂತಸದ ವಿಷಯ, ವಿಜ್ಞಾನ-ತಂತ್ರಜ್ಞಾನದ ಜೊತೆ ಜೊತೆಗೆ ಕನ್ನಡವನ್ನು ಬಳಸಿ, ಬೆಳೆಸಬೇಕು ಎಂದು ತಿಳಿಸಿದರು
ಕನ್ನಡದ ಬಳಕೆ ಹಾಗೂ ಕನ್ನಡದ ಬೆಳವಣಿಗೆಗೆ ಸರ್ಕಾರ ನೀಡಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ನವೆಂಬರ್ 01, 2024 ರವರಿಗೆ ಕನ್ನಡದ ಬೆಳವಣಿಗೆ, ಅಭಿವೃದ್ಧಿಗೆ ಸಂಬಂಧಿಸಿದ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಚಿವ ಮಹದೇವಪ್ಪ ಹೇಳಿದರು.
ಹುಯಿಲಗೋಳ ನಾರಾಯಣರಾಯರು ರಚಿಸಿರುವ ಉದಯವಾಗಲಿ ಚೆಲುವ ಕನ್ನಡನಾಡು, ರಾಷ್ಟ್ರಕವಿ ಕುವೆಂಪು ಅವರ ಗೀತೆ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಒಂದೇ ಒಂದೇ ಕರ್ನಾಟಕ ಒಂದೇ, ಸಿದ್ದಯ್ಯ ಪುರಾಣಿಕ ಅವರ ಹೊತ್ತಿತು ಹೊತ್ತಿತು ಕನ್ನಡದ ದೀಪ, ಚೆನ್ನವೀರ ಕಣವಿ ಅವರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಗೀತೆಗಳನ್ನು ಕಲಾವಿದರು ಪ್ರಸ್ತುತಪಡಿಸಿದರು.
ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ 50 ಸಾಧಕರು ಹಾಗೂ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪಡೆದ 17 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಶಿವಕುಮಾರ್, ಶಾಸಕರಾದ ತನ್ವೀರ್ ಸೇಟ್, ಜಿ.ಟಿ ದೇವೇಗೌಡ,ಕೆ.ಹರೀಶ್‌ಗೌಡ ,
ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಎಚ್.ವಿಶ್ವನಾಥ್, ಸಿ.ಎನ್ ಮಂಜೇಗೌಡ, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಪೌರರಾದ ಡಾ.ಜಿ ರೂಪ , ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ, ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು.