ಹುಲಿ ಕೂಂಬಿಂಗ್ ಆಪರೇಶನ್ : ಮೇಕೆ ತಿಂದು ಆಟ ಆಡಿಸುತ್ತಿರುವ ವ್ಯಾಘ್ರ

ಮೈಸೂರು: ನಂಜನಗೂಡು ತಾಲೂಕು ಮಹದೇವನಗರ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಹಸು ಬಲಿ ಪಡೆದು ದನಗಾಹಿ ಮೇಲೆ ದಾಳಿ ನಡೆಸಿದ ಹುಲಿ ಸೆರೆ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದ್ದರೂ ಅದು ಅರಣ್ಯ ಸಿಬ್ಬಂದಿಯನ್ನು ಆಟ ಆಡಿಸುತ್ತಿದೆ.

ಸಾಕಾನೆಗಳ ಸಹಕಾರದಿಂದ ಹುಲಿ ಸೆರೆಗೆ ಸಮರೋಪಾದಿಯಲ್ಲಿ ಕೂಂಬಿಂಗ್ ಆಪರೇಷನ್ ನಡೆಯತ್ತಿದೆ.ಆದರೆ ಹುಲಿ ಮತ್ತೆ ಮೇಕೆಯನ್ನು ತಿಂದು ನಾನು ಯಾರಿಗೂ ಸಿಗಲಾರೆ ಎಂದು ಚಳ್ಳೇಹಣ್ಣು ತಿನ್ನಿಸುತ್ತಿದೆ.

ಆರ್.ಎಫ್.ಒ.ನಾರಾಯಣರಾವ್ ಹಾಗೂ ಎಸಿಎಫ್ ಪರಮೇಶ್ ನೇತೃತ್ವದಲ್ಲಿ 30 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಮಹದೇವನಗರ ಗ್ರಾಮದ ಸುತ್ತಮುತ್ತಲಿನ 7 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕೂಂಬಿಂಗ್ ಆಪರೇಷನ್ ನಡೆಯುತ್ತಿದೆ.

ಹುಲಿ ಸೆರೆಗೆ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಮತ್ತೊಂದೆಡೆ ಮೇಕೆಯನ್ನ ಹುಲಿ ಬಲಿ ಪಡೆದಿದೆ.

ಮಹದೇವ ನಗರದ ವೀರಭದ್ರ ಬೋವಿ ಅವರ ಮನೆ ಮೇಲೆ ದಾಳಿ ನಡೆಸಿ ನಂತರ ಸನಿಹದ ಜಮೀನಿನಲ್ಲಿ ರಾಜಾರೋಷವಾಗಿ ಓಡಾಡಿದೆ ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಈ ಹಿಂದೆ ಹಾದನೂರು ಒಡೆಯನಪುರ ಗ್ರಾಮದಲ್ಲಿ ವ್ಯಕ್ತಿಯನ್ನ ಹುಲಿ ಬಲಿ ಪಡೆದಿತ್ತು.ಆಗ ನಡೆಸಿದ ಕಾರ್ಯಾಚರಣೆಯಲ್ಲಿ ಹುಲಿ ಸೆರೆ ಸಿಕ್ಕಿರಲಿಲ್ಲ.

ಇದೀಗ ಮಹದೇವನಗರದಲ್ಲಿ ಇದೇ ರೀತಿ ದಾಳಿ ನಡೆಸಿ ದನಗಾಹಿಯನ್ನ ಗಾಯಗೊಳಿಸಿದೆ.

ಈಗಾಗಲೇ ಹತ್ತು ಸಿಸಿ ಕ್ಯಾಮರಾಗಳನ್ನ ಬಳಸಿಕೊಳ್ಳಲಾಗಿದ್ದು ಇನ್ನೂ ಹತ್ತು ಕ್ಯಾಮರಾ ಬಳಸಿಕೊಂಡು,ಸಾಕಾನೆಗಳಾದ ಪಾರ್ಥ ಹಾಗೂ ಧರ್ಮ ಆನೆಗಳನ್ನು ಕಾರ್ಯಾಚರಣೆಗೆ ತೊಡಗಿಸಿಕೊಳ್ಳಲಾಗಿದೆ.

ಶೀಘ್ರವೆ ಹುಲಿ ಸೆರೆಯಾಗಲಿ ಎಂದು ಜನತೆ ಆಶಿಸಿದ್ದಾರೆ.ಅವರ ಆಶಯ ಬೇಗ ಈಡೇರಲಿ.