ಮೈಸೂರು: ಬಿಜೆಪಿಯವರು ರಾಜ್ಯದಲ್ಲಿ ಬರಪರಿಸ್ಥಿತಿ ಅಧ್ಯಯನ ನಡೆಸುವ ಬದಲು ದೆಹಲಿಗೆ ಹೋಗಿ ಪರಿಹಾರ ಬಿಡುಗಡೆಗೆ ವ್ಯವಸ್ಥೆ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಭಾನುವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಸಿಎಂ ಮಾತನಾಡಿದರು.
ಬಿಜೆಪಿಯವರಿಗೆ ಹತಾಶ ಮನೋಭಾವನೆ ಉಂಟಾಗಿದೆ, ಬಿಜೆಪಿ ಹಾಗೂ ಜೆಡಿಎಸ್ ಸೇರಿ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಆದರೆ ಅದು ಆಗದೆ ಇರುವುದರಿಂದ ಅವರಲ್ಲಿ ಹತಾಶ ಮನೋಭಾವನೆ ಉಂಟಾಗಿದೆ ಎಂದು ಸಿದ್ದು ಟಾಂಗ್ ನೀಡಿದರು.
ರಾಜ್ಯದಲ್ಲಿ ಉಂಟಾಗಿರುವ ಬರಪರಿಸ್ಥಿತಿಯನ್ನು ಸರ್ಕಾರ ಉತ್ತಮವಾಗಿ ನಿಯಂತ್ರಿಸುತ್ತಿದೆ. ಕೇಂದ್ರದಿಂದ ಬರ ಪರಿಹಾರದ ಹಣ ಬರದಿದ್ದರೂ ರಾಜ್ಯ ಸರ್ಕಾರ ಅಗತ್ಯವಾದ ನೆರವನ್ನು ಸಂತ್ರಸ್ತರಿಗೆ ನೀಡುತ್ತಿದೆ ಎಂದು ಸಿಎಂ ತಿಳಿಸಿದರು.
ಕಾಂತರಾಜು ಅವರ ವರದಿಯನ್ನು ಜಾರಿಗೆ ತರುತ್ತೀರಾ ಎಂಬ ಪ್ರಶ್ನೆಗೆ, ಅವರು ನವೆಂಬರ್ ತಿಂಗಳಿನಲ್ಲಿ ವರದಿಯನ್ನು ಸರ್ಕಾರಕ್ಕೆ ನೀಡುವುದಾಗಿ ತಿಳಿಸಿದ್ದಾರೆ.
ಆನಂತರ ವರದಿಯನ್ನು ನೋಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿದ್ದರಾಮಯ್ಯನವರು ಹೇಳಿದರು.
ಕಾಂತರಾಜು ವರದಿಯನ್ನು ಸುಟ್ಟು ಹಾಕಬೇಕು ಎಂದು ಕೆಎಸ್ ಈಶ್ವರಪ್ಪ ಹೇಳಿದರಲ್ಲ ಎಂಬ ಪ್ರಶ್ನೆಗೆ, ಈಶ್ವರಪ್ಪನವರನ್ನು ಅವರ ಪಕ್ಷದಲ್ಲಿಯೇ ಪರಿಗಣಿಸಿಲ್ಲ, ಅವರು ಸವಕಲು ನಾಣ್ಯ ಅವರ ಮಾತಿಗೆ ಬೆಲೆ ಎಲ್ಲಿದೆ ಎಂದು ಟೀಕಿಸಿದರು.