ಮೈಸೂರು: ಕೌಟುಂಬಿಕ ಕಲಹದಿಂದ ಬೇಸತ ವ್ಯಕ್ತಿ ತನ್ನ ಮಗುವಿನೊಂದಿಗೆ ಓವರ್ ಹೆಡ್ ಟ್ಯಾಂಕ್ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕಸುವಿನಹಳ್ಳಿ ಗ್ರಾಮದ ಕೃಷ್ಣಮೂರ್ತಿ(40) ತನ್ನ ಎರಡು ವರ್ಷದ ಮಗನೊಂದಿಗೆ ಗ್ರಾಮದ ಓವರ್ ಹೆಡ್ ವಾಟರ್ ಟ್ಯಾಂಕ್ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಗಂಡ ಹೆಂಡತಿ ನಡುವೆ ಭಿನ್ನಭಿಪ್ರಾಯ ಉಂಟಾಗಿ ಜಗಳ ನಡೆದಿದೆ. ಇದರಿಂದ ಬೇಸತ್ತ ಕೃಷ್ಣಮೂರ್ತಿ ಮಗುವಿನೊಂದಿಗೆ ವಾಟರ್ ಟ್ಯಾಂಕ್ ಮೇಲೇರಿ ಕೆಳಗೆ ಬೀಳುವುದಾಗಿ ಬೆದರಿಸಿದ್ದಾನೆ.
ಗ್ರಾಮಸ್ಥರು ಕೆಳಗೆ ಇಳಿಯುವಂತೆ ಎಷ್ಟೇ ಮನವಿ ಮಾಡಿದರೂ ಕೇಳದೆ ಆತ್ಮಹತ್ಯೆಗೆ ಶರಣಾಗುವುದಾಗಿ ಪಟ್ಟು ಹಿಡಿದಿದ್ದ.
ಬಳಿಕ ಸ್ಥಳೀಯರು ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಗಿರೀಶ್, ಚೇತನ್ ಭೇಟಿ ನೀಡಿ ಆತನ ಸಮಸ್ಯೆಯನ್ನ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಮಗುವಿನೊಂದಿಗೆ ಆತ ಕೆಳಗೆ ಇಳಿದು ಬಂದಿದ್ದಾನೆ.
ಕೃಷ್ಣಮೂರ್ತಿಯನ್ನ ವಶಕ್ಕೆ ಪಡೆದು ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡರು.