ಬೆಂಗಳೂರು: ಮನೆ ಬಾಡಿಗೆ ಪಡೆದು ಅಡುಗೆ ಮನೆಯಲ್ಲೇ ಡ್ರಗ್ಸ್ ತಯಾರಿಸುತ್ತಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ಮಹಾನುಭಾವ ಅಡುಗೆ ಮನೆಯನ್ನೇ ಡ್ರಗ್ಸ್ ಕಾರ್ಖಾನೆಯನ್ನಾಗಿ ಮಾಡಿಕೊಂಡಿದ್ದ.
ನೈಜೀರಿಯಾ ಪ್ರಜೆ ಬೆಂಜಮಿನ್ ಬಂಧಿತ ಆರೋಪಿ.
ಈತ ಅವಲಹಳ್ಳಿಯ ಮನೆಯ ಅಡುಗೆ ಕೋಣೆಯಲ್ಲಿ ಕಚ್ಚಾ ಪದಾರ್ಥ ಸೇರಿಸಿ ದೋಸೆಯ ರೀತಿ ಮಾಡಿಕೊಳ್ಳುತ್ತಿದ್ದ.
ನಂತರ ಪ್ರೆಶರ್ ಕುಕ್ಕರ್ಗೆ ಪೈಪ್ ಅಳವಡಿಸಿ ಇದರಿಂದ ಬರುವ ಆವಿಯಿಂದ ಕ್ರಿಸ್ಟಲ್ ಬರುವಂತೆ ಮಾಡಿ ಎಂಡಿಎಂಎ ಉತ್ಪಾದಿಸುತ್ತಿದ್ದ ಎಂದು ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಕಮಿಷನರ್ ಬಿ.ದಯಾನಂದ್ ತಿಳಿಸಿದರು.
ಸಿಸಿಬಿಯ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ರಾಮಮೂರ್ತಿ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಬೆಂಜಮಿನ್ ನ್ನು ಬಂಧಿಸಿದ್ದಾರೆ.
ಆರೋಪಿ ಎಲ್ಲಿಂದ ಎಂಡಿಎಂಎ ತರಿಸುತ್ತಿದ್ದಾನೆ ಎಂದು ವಿಚಾರಣೆ ನಡೆಸಿದಾಗ ಬೆಂಜಮಿನ್ ವಾಸವಿದ್ದ ಮನೆಯಲ್ಲೇ ಎಂಡಿಎಂಎ ಕ್ರಿಸ್ಟಲ್ ತಯಾರಿಸುತಿದ್ದ ವಿಚಾರ ಗೊತ್ತಾಗಿದೆ.
ಡ್ರಗ್ಸ್ ತಯಾರು ಮಾಡಿ, ನಂತರ ಅದನ್ನು ಕೇವಲ ನೈಜೀರಿಯಾ ಮತ್ತು ಆಫ್ರಿಕಾ ಮೂಲದವರಿಗೆ ಮಾರಾಟ ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.
ತಯಾರು ಮಾಡಿಟ್ಟಿದ್ದ ಸುಮಾರು 10 ಕೋಟಿ ರೂ. ಮೌಲ್ಯದ 5 ಕೆಜಿ ಎಂಡಿಎಂಎ ಮತ್ತು ಅದನ್ನು ತಯಾರು ಮಾಡಲು ಬೇಕಾಗಿದ್ದ 5 ಕೆಜಿ ಕಚ್ಚಾವಸ್ತುಗಳನ್ನು ಅಧಿಕಾರಿಗಳು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.