ಮೈಸೂರು: ದುಷ್ಕರ್ಮಿಗಳ ವಿಧ್ವಂಸಕ ಯತ್ನವನ್ನು ವಿಫಲಗೊಳಿಸುವ ಮೂಲಕ ಲೋಕೋ ಪೈಲಟ್ (ಚಾಲಕ) ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಾಮರಾಜನಗರದಿಂದ ಮೈಸೂರಿಗೆ ಬರುತ್ತಿದ್ದ ಎಕ್ಸ್ ಪ್ರೆಸ್ ರೈಲು ಗಾಡಿ ಸಂ. 06275 ರ ಲೋಕೋ ಪೈಲಟ್ ನಂಜನಗೂಡು ಮತ್ತು ಕಡಕೊಳ ರೈಲ್ವೆ ನಿಲ್ದಾಣಗಳ ನಡುವಿನ ರೈಲ್ವೆ ಹಳಿಯಲ್ಲಿ ಸಂಭಾವ್ಯ ಅನಾಹುತವನ್ನು ತಪ್ಪಿಸಿ ಶ್ಲಾಘನೀಯ ಕಾರ್ಯ ಮಾಡಿದ್ದಾರೆ.
ರೈಲ್ವೆ ಎಂಜಿನ್ ನ ಚಾಲಕನ ತ್ವರಿತ ಕ್ರಿಯೆಯಿಂದಾಗಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕಾಪಾಡಲಾಗಿದ್ದು ರೈಲನ್ನು ಧ್ವಂಸಗೊಳಿಸುವ ದುರುದ್ದೇಶಪೂರಿತ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸೋಮಯ್ ಮರಾಂಡಿ (22 ವರ್ಷ), ಭಜನು ಮುರ್ಮು ಮತ್ತು ದಸಮತ್ ಮರಾಂಡಿ ಎಂಬ ವ್ಯಕ್ತಿಗಳನ್ನು ರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್) ಮತ್ತು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್ಪಿ) ಬಂಧಿಸಿದ್ದಾರೆ.
ಈ ಮೂವರು ಉದ್ದೇಶಪೂರ್ವಕವಾಗಿ ಕಿಲೋ ಮೀಟರ್. ನಂ 19/200-300 ರಲ್ಲಿ ಹಳಿಗಳ ಮೇಲೆ ಕಬ್ಬಿಣದ ಸ್ಲೀಪರ್ ಮತ್ತು ಮರದ ದಿಮ್ಮಿಗಳನ್ನು ಇರಿಸಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.
ಮಾಹಿತಿ ಪಡೆದ ಮೈಸೂರಿನ ರೈಲ್ವೆ ಸಂರಕ್ಷಣಾ ದಳದ (ಆರ್ಪಿಎಫ್) ಸಹಾಯಕ ರಕ್ಷಣಾ ಆಯುಕ್ತ ಎಂ.ಎನ್.ಎ.ಖಾನ್, ಪೋಸ್ಟ್ ಕಮಾಂಡರ್ ಕೆ.ವಿ.ವೆಂಕಟೇಶ ಮತ್ತು ಅವರ ತಂಡ, ಆರ್ಪಿಎಫ್ ನ ಶ್ವಾನ ದಳ ಸ್ಥಳಕ್ಕೆ ಧಾವಿಸಿ ಕಾರ್ಯ ತತ್ಪರರಾದರು.
ಒಡಿಶಾದ ಮಯೂರ್ಬಂಜ್ ನ ಬಂಗಿರಿಪೋಸಿದ ಜಲ್ದಿಹಾ ಮೂಲದ ಸೋಮಯ್ ಮರಾಂಡಿ ಎಂಬಾತ ಸ್ಥಳದಲ್ಲಿ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ, ತನ್ನ ಸಹಚರರೊಂದಿಗೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಮೈಸೂರಿನ ಸರ್ಕಾರಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ರವರು ರೈಲಿನ ಚಾಲಕನ ಸಮಯೋಚಿತ ಕ್ರಮ ಮತ್ತು ಭದ್ರತಾ ಪಡೆಗಳ ತ್ವರಿತ ಪ್ರತಿಕ್ರಿಯೆ ಶ್ಲಾಘಿಸಿ, ಪ್ರಯಾಣಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ವಿಚಾರಿಸಿಕೊಂಡು ಕೃತಜ್ಞತೆ ಸಲ್ಲಿಸಿದರು.