ಕಡ್ಲೆಕಾಯಿ ವಾಹನಕ್ಕೂ ಬಂತು ಸಿಸಿ ಕ್ಯಾಮೆರಾ!

ಮೈಸೂರು: ಸಾಮಾನ್ಯವಾಗಿ ಮನೆ, ದೊಡ್ಡ ದೊಡ್ಡ ಮಾಲ್​ಗಳು, ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವುದನ್ನು ನೋಡಿದ್ದೇವೆ. ಆದರೆ, ಮೈಸೂರಿನ ತರಕಾರಿ ವ್ಯಾಪಾರಸ್ಥರೊಬ್ಬರು ತಮ್ಮ ಗೂಡ್ಸ್ ಆಟೋಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿ ಅಚ್ಚರಿ ಮೂಡಿಸಿದ್ದಾರೆ.

ಕಳರು,ದರೋಡೆಕೋರರು ಅಥವಾ ಅಪರಿಚಿತರು ಬಂದರೆ ಗೊತ್ತಾಗಲಿ ಎಂಬ ಕಾರಣಕ್ಕೆ ಮನೆಗಳಿಗೆ,ಮಾಲ್ ಗಳಿಗೆ ದೊಡ್ಡ,ದೊಡ್ಡ ಕಟ್ಟಡಗಳಿಗೆ ಸಿಸಿಟಿವಿ ಕ್ಯಾಮರ ಹಾಕಲಾಗುತ್ತದೆ.

ಆದರೆ ತರಕಾರಿ ಮಾರಾಟ ಮಾಡುವ ವಾಹನಕ್ಕೂ ಸಿಸಿಟಿವಿ ಕ್ಯಾಮರ ಅಳವಡಿಸುವ ಮೂಲಕ ಇತರೆ ವ್ಯಾಪಾರಸ್ಥರಿಗು ಜಾಗೃತಿ ಮೂಡಿಸುತ್ತಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ರಸ್ತೆಯ ಪಕ್ಕದಲ್ಲಿ ಗೂಡ್ಸ್ ಆಟೋದಲ್ಲಿ ಅವರೆಕಾಯಿ, ತೊಗರಿಕಾಯಿ, ಕಡ್ಲೆಕಾಯಿ ಸೇರಿದಂತೆ ಆಯಾ ಋತುಮಾನಗಳಲ್ಲಿ ಬೆಳೆಯುವ ತರಕಾರಿಗಳನ್ನು ಇಡಲಾಗಿದೆ.

ಹುಣಸೂರಿನ ಬನ್ನಿಕುಪ್ಪೆ ಕಡೆಯಿಂದ ತರಕಾರಿ ತಂದು ಇಲ್ಲಿ ವ್ಯಾಪಾರ ಮಾಡಲಾಗುತ್ತದೆ.

ಆದರೆ ಈ ಗಾಡಿಯ ಮಾಲೀಕ ಮಹದೇವ್, ಇಲ್ಲಿ ಕೆಲಸಕ್ಕೆ ಹುಡುಗರನ್ನು ಇಟ್ಟುಕೊಂಡಿದ್ದು, ಅವರು ಮತ್ತೊಂದು ಕಡೆ ವ್ಯಾಪಾರ ಮಾಡುತ್ತಾರೆ.

ಇಲ್ಲಿ ಸ್ವತಃ ಮಹದೇವ್ ಇದ್ದಾಗ ವ್ಯಾಪಾರ ಚೆನ್ನಾಗಿ ನಡೆಯುತ್ತದೆ, ಕೆಲಸದ ಹುಡುಗರು ಇದ್ದಾಗ ಹೇಳಿಕೊಳ್ಳುವಂತ ವ್ಯಾಪಾರ ಆಗುವುದಿಲ್ಲ.

ಹಾಗಾಗಿ ಇಲ್ಲಿ ವ್ಯಾಪಾರ ಹೇಗೆ ನಡೆಯುತ್ತಿದೆ ಎಂದು ನಿಗಾ ವಹಿಸಲು 6 ಸಾವಿರ ರೂಪಾಯಿ ಕೊಟ್ಟು ಸಿಸಿಟಿವಿ ಖರೀದಿಸಿ ಆಟೋಗೆ ಅಳವಡಿಸಿದ್ದಾರೆ ಮಹದೇವ್

ಸಿಸಿಟಿವಿ ಕ್ಯಾಮರಾಗೆ ಸಿಮ್ ಮತ್ತು ಮೆಮೊರಿ ಕಾರ್ಡ್ ಇದೆ. ಮಾಲೀಕರು ಎಲ್ಲೇ ಇದ್ದರೂ, ಅಲ್ಲಿಂದ ಇಲ್ಲಿನ ವ್ಯಾಪಾರ ಹೇಗೆ ನಡೆಯುತ್ತಿದೆ ಎಂದು ತಮ್ಮ ಮೊಬೈಲ್​ನಿಂದಲೇ ನೋಡಬಹುದು ಜತೆಗೆ  ಡೇಟಾವನ್ನು 30 ದಿನಗಳವರೆಗೆ ಉಳಿಸಿಕೊಳ್ಳಬಹುದಾಗಿದೆ.

ಈ ಬಗ್ಗೆ ಕೆಲಸಗಾರ ಮನೋಜ್ ಮಾತನಾಡಿ ತರಕಾರಿ ಖರೀದಿಸಲು ಹೆಚ್ಚು ಜನರು ಸೇರಿದಾಗ ಕೆಲವರು ಹಣ ಕೊಡದೇ ಹೊರಟು ಹೋಗುತ್ತಾರೆ. ಇನ್ನು ಕೆಲವರು 50 ರೂಪಾಯಿ ಕೊಟ್ಟು 500 ರೂಪಾಯಿ ಕೊಟ್ಟೆ ಎನ್ನುತ್ತಾರೆ.

ಇಲ್ಲಿ ನಾವು 6 ವರ್ಷಗಳಿಂದ ಅವರೆಕಾಯಿ, ತೊಗರಿಕಾಯಿ, ಕಡ್ಲೆಕಾಯಿ ಸೇರಿದಂತೆ ವಿವಿಧ ತರಕಾರಿಗಳನ್ನು ವ್ಯಾಪಾರ ಮಾಡುತ್ತಿದ್ದೇವೆ. ಸಿಸಿಟಿವಿ ಕ್ಯಾಮರಾದಿಂದ ಮಾಲೀಕರ ಮನೆಯವರು ಮತ್ತು ಮಾಲೀಕರು ನಿತಂತರವಾಗಿ ನಿಗಾ ವಹಿಸಿರುತ್ತಾರೆ ಇದು ನುಜಕ್ಕೂ ಒಳ್ಳಯದು ಎನ್ನುತ್ತಾರೆ.

ಯಾರಾದರೂ ಹಣ ಕೊಡದಿದ್ದರೆ, ಅವರು ಹಣ ಕೊಟ್ಟಿಲ್ಲ ನೋಡು ಎಂದು ನಮಗೆ ಮಾಲೀಕರು ಅಲ್ಲಿಂದಲೇ ತಿಳಿಸುತ್ತಾರೆ ಹಾಗಾಗಿ ಮೋಸ ಹೋಗುವುದು ತಪ್ಪುತ್ತದೆ ಎಂದು ತಿಳಿಸಿದರು.