ಭಾವನ ಮೇಲೆ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದ ಭಾವಮೈದುನ

ಮೈಸೂರು: ನಾದಿನಿ ಜೊತೆ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದನ್ನು ಪ್ರಶ್ನಿಸಿದ ಭಾವನ ಮೇಲೆ ಭಾವಮೈದುನ, ಅಂಬ್ಯುಲೆನ್ಸ್ ಚಾಲಕ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದು ಮಾರಣಾಂತಿಕ ಹಲ್ಲೆ ನಡೆಸಿರುವ‌ ಹೇಯ ಘಟನೆ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ.

ಮೈಸೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಟ್ರಾಮಾ ಸೆಂಟರ್ ನ ಅಂಬ್ಯುಲೆನ್ಸ್ ಡ್ರೈವರ್  ಸಂದೇಶ್ ಈ ರೀತಿ ವಿಕೃತಿ ಮೆರೆದ ಕಿರಾತಕ.

ಆತ ಅದೇ ಆಸ್ಪತ್ರೆ ಸೆಕ್ಯೂರಿಟಿ ಗಾರ್ಡ್ ಆಗಿರುವ ಭಾವ ಮಹೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಮಹೇಶ್ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂದೇಶ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂದೇಶ್ ಈ ಹಿಂದೆ ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಇಟ್ಟು ಯುವತಿಯರು, ಆಸ್ಪತ್ರೆ ನರ್ಸ್ ಗಳ ವೀಡಿಯೋ ಮಾಡಿ ಸಿಕ್ಕಿಬಿದ್ದಿದ್ದ.

ಈ ವಿಚಾರಕ್ಕೆ ಕೆ.ಆರ್‌.ಆಸ್ಪತ್ರೆಯಿಂದ ಸಂದೇಶ್ ನನ್ನು ಕೆಲಸದಿಂದ ತೆಗೆಯಲಾಗಿತ್ತು.

ನಂತರ ಆತ ಮೈಸೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಟ್ರಾಮಾ ಸೆಂಟರ್ ನ ಅಂಬ್ಯುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.

ಅಲ್ಲೂ ಕೂಡ ಇದೇ ರೀತಿ ಚಾಳಿಯನ್ನು ಸಂದೇಶ್  ಮುಂದುವರೆಸಿದ್ದ.

ಅಲ್ಲೆ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಮಹೇಶ್ ಅವರ ನಾದಿನಿಯ ಜೊತೆ ಸಂದೇಶ್ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದುದು ಗೊತ್ತಾಗಿ ಅದನ್ನು ಮಹೇಶ್  ಪ್ರಶ್ನೆ ಮಾಡಿದ್ದಾರೆ.

ಜೊತೆಗೆ ಆಸ್ಪತ್ರೆ ಅಧಿಕಾರಿಗಳಿಗೂ ಈ ಕುರಿತು ದೂರು ನೀಡಿದ್ದರು.

ಇದರಿಂದ ಕೋಪಗೊಂಡಿದ್ದ ಸಂದೇಶ್ ಸೋಮವಾರ ಆಸ್ಪತ್ರೆಗೆ ಕೆಲಸಕ್ಕೆ ಬರುತ್ತಿದ್ದ ಮಹೇಶ್ ರನ್ನು ಮೈಸೂರಿನ ಹೊರವಲಯದ ಬಂಡೀಪಾಳ್ಯದ ಬಳಿಗೆ ಕರೆದುಕೊಂಡು ಹೋಗಿದ್ದ.

ಅಲ್ಲಿ ಸಂದೇಶ್ ಹಾಗೂ ಆತನ ಸ್ನೇಹಿತರು ಮಹೇಶ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಅಲ್ಲದೆ ಮಹೇಶ್ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ‌ ಮೆರೆದಿದ್ದಾರೆ.