ದಸರಾ ಆನೆಗಳ ಕ್ಯಾಪ್ಟನ್ ಅರ್ಜುನ ವೀರಮರಣ:ಮದಗಜಗಳ ಕಾಳಗದಲ್ಲಿ‌ ಮರಣ

ಹಾಸನ: ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತು ಜನಮನಗೆದ್ದಿದ್ದ ಅರ್ಜುನ ಇಂದು ವೀರಮರಣ ಅಪ್ಪಿದ್ದಾನೆ.

ಮದಗಜಗಳ ಕಾಳಗದಲ್ಲಿ ದಸರಾ ಆನೆಗಳ ಕ್ಯಾಪ್ಟನ್ ಆಗಿದ್ದ ಅರ್ಜುನ ಮೃತಪಟ್ಟಿದ್ದಾನೆ.

ಎರಡು ಸಲಗಗಳು ಕಾಳಗಕ್ಕೆ ಇಳಿಯುತ್ತಿದ್ದಂತೆಯೇ ಅರ್ಜುನನ ಮೇಲಿನಿಂದ ಮಾವುತರು ಹೆದರಿ ಇಳಿದು ಓಡಿದ್ದಾರೆ

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಯಸಳೂರು ಬಾಳೆಕೆರೆ ಫಾರೆಸ್ಟ್ ನಲ್ಲಿ ಘಟನೆ ನಡೆದಿದ್ದು,ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಕಾಡಾನೆ ಸೆರೆ, ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ವೇಳೆ ಈ ದುರಂತ ಸಂಭವಿಸಿದ್ದು,
ಕಾಳಗದ ವೇಳೆ ಹೊಟ್ಟೆ ಭಾಗಕ್ಕೆ ತಿವಿತಕ್ಕೆ ಒಳಗಾಗಿ ಅರ್ಜುನ ಮೃತಪಟ್ಟಿದ್ದಾನೆ.

ಅರಣ್ಯ ಇಲಾಖೆ ಅಧಿಕಾರಿಗಳು ಅರ್ಜುನ‌ ಸೇರಿ ನಾಲ್ಕು ಪಳಗಿದ ಆನೆಗಳೊಂದಿಗೆ ಸೋಮವಾರ ಕೂಡಾ ಕಾರ್ಯಾ ಚರಣೆ ಆರಂಭಿಸಿದ್ದರು.

ಪುಂಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡುವಾಗ ಅದು ಅರ್ಜುನನ ಮೇಲೆ ದಾಳಿ ಮಾಡಿದೆ.

ಒಂಟಿ ಸಲಗ ದಾಳಿ ಮಾಡುತ್ತಿದ್ದಂತೆಯೇ ಉಳಿದ ಮೂರು ಸಾಕಾನೆಗಳು ಹಿಂದಡಿ ಇಟ್ಟಿವೆ,ಆದರೆ ಅರ್ಜುನ ಒಂಟಿ ಸಲಗದ ಜೊತೆ ಕಾಳಗಕ್ಕಿಳಿದು ಹೋರಾಡಿ ಮೃತಪಟ್ಟಿದ್ದಾನೆ.

ಎಲ್ಲಾ ರೀತಿಯಲ್ಲೂ ಜನರ ಪ್ರೀತಿಗೆ ಪಾತ್ರನಾಗಿದ್ದ ಕ್ಯಾಪ್ಟನ್
ಅರ್ಜುನನ ಹಠಾತ್ ಸಾವು ಕಂಡು ಮಾವುತರು ಕಣ್ಣೀರು ಹಾಕಿದರು.

ಅರ್ಜುನನ ದೇಹವನ್ನು ತಬ್ಬಿ ಹಿಡಿದು ಮಾವುತರು ದುಃಖಿಸುತ್ತಿದ್ದುದು ಸುತ್ತ ನೆರೆದಿದ್ದ ಜನರ ಕಣ್ಣಲ್ಲೂ ನೀರು ತರಿಸಿತು.

ಅರ್ಜುನ ಆನೆ ಸಾವಿನಿಂದ ಮೈಸೂರಿನ ಜನರಿಗೆ ಹಾಗೂ ಪ್ರಾಣಿಪ್ರಿಯರಿಗೆ ಶಾಕ್ ಆಗಿದೆ,ಬರೋಬ್ಬರಿ 8 ಬಾರಿ ಅಂಬಾರಿ( 2012 ರಿಂದ 19 ರವರೆಗೆ) ಹೊತ್ತು ಸೈ ಎನಿಸಿ ಕೊಂಡಿದ್ದ ಅರ್ಜುನ.