ಸರ್ಕಾರದ ಸೌಲಭ್ಯಗಳ ಮಾಹಿತಿ ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಹಿರಿದು -ಎನ್ ಕೆ ಲೋಕನಾಥ್

ಮೈಸೂರು: ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ  ಉಪ ಕುಲಪತಿಗಳಾದ ಪ್ರೊ. ಎನ್ ಕೆ ಲೋಕನಾಥ್  ತಿಳಿಸಿದರು.

ಮೈಸೂರಿನ ಸಿದ್ದಾರ್ಥ ಹೋಟೆಲ್ ನಲ್ಲಿ  ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಪತ್ರಕರ್ತರ ಸಂಘ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮಾನಸ ಗಂಗೋತ್ರಿ, ಮೈಸೂರು ವಿಶ್ವ ವಿದ್ಯಾಲಯ ಸಹಯೋಗದಲ್ಲಿ ಮೈಸೂರು ಜಿಲ್ಲಾ ಮಾದ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ವಾರ್ತಾಲಾಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸಂವಹನ ಬಹಳ ಮುಖ್ಯ, ಸರ್ಕಾರದ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗೆ ತಲುಪಿಸಲು ಮಾದ್ಯಮಗಳ ಪಾತ್ರ ಬಹಳ ಮುಖ್ಯ. ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರದ ಸೌಲಭ್ಯಗಳ ಮಾಹಿತಿ ದೊರೆಯಬೇಕು. ಇಂತಹ ಮಾಹಿತಿ ನೀಡುವ ಕಾರ್ಯಕ್ರಮಗಳು ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ನಡೆಯಬೇಕು. ಪತ್ರಿಕೆಗಳು ಮಾಹಿತಿಗಳನ್ನು ನೀಡುವ ಕೊಂಡಿಗಳು ಎಂದು ಬಣ್ಣಿಸಿದರು.

ಕೇಂದ್ರ ವಾರ್ತಾ ಶಾಖೆಯ ಹೆಚ್ಚುವರಿ ಮಹಾ ನಿರ್ದೇಶಕರಾದ ಎಸ್ ಜಿ ರವೀಂದ್ರ ಮಾತನಾಡಿ ಕೇಂದ್ರ ಸರ್ಕಾರ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದಲ್ಲಿ 79 ಯೋಜನೆಗಳು ಇದ್ದು ಇವುಗಳನ್ನು ಪ್ರಚಾರ ಮಾಡಲು ರಾಜ್ಯದಲ್ಲಿ 49 ವಾಹನಗಳು ಸಂಚಾರ  ಮಾಡುತ್ತಿವೆ.

ಬುಡಕಟ್ಟು ಜನಾಂಗಗಳ ಏಳಿಗೆಗೆ ಏಕಲವ್ಯ ಶಾಲೆಗಳನ್ನು ತೆರೆದು ಶಿಕ್ಷಣ ನೀಡಲಾಗುತ್ತಿದೆ. ವಿಕಸಿತ ಭಾರತ ಸಂಕಲ್ಪ ಯಾತ್ರೆ ದೇಶದಾದ್ಯಂತ ನಡೆಯುತ್ತಿದೆ. ಡಿಸೆಂಬರ್ 09 ರಂದು ಪ್ರಧಾನ ಮಂತ್ರಿಗಳು ಕೋಲಾರ ಮತ್ತು ತುಮಕೂರಿನ ಜಿಲ್ಲೆಯ ಜನರೊಂದಿಗೆ ವರ್ಚುವಲ್ ಸಭೆಯ ಮೂಲಕ ಸಂವಾದ ನಡೆಸುತ್ತಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕುಮಾರಸ್ವಾಮಿ ಮಾತನಾಡಿ ಕಳೆದ ಎರಡು ವರ್ಷಗಳ ಹಿಂದೆ ಬಂದ ಕೋವಿಡ್ ನ್ನು ಆರೋಗ್ಯ ಇಲಾಖೆ ಯಶಸ್ವಿಯಾಗಿ ಎದುರಿಸಿತು. ಪಲ್ಸ್ ಪೋಲಿಯೋ ಲಸಿಕೆ ಯನ್ನು ಯಶಸ್ವಿಯಾಗಿ ನೀಡಿ 2014 ರಲ್ಲಿ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೋಷಿಸಲಾಗಿದೆ. 2025 ಕೆ ಕುಷ್ಟ ರೋಗ ಮುಕ್ತ ಮಾಡಲು ಹಲವು ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 20 ರಾಷ್ಟ್ರೀಯ ಯೋಜನೆಗಳನ್ನು ಆರೋಗ್ಯ ಇಲಾಖೆಯಿಂದ ಕಾರ್ಯ ರೂಪಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರು.

ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಸ್ವಪ್ನ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಟಿ ರವಿಕುಮಾರ್,ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನ ಕುಮಾರ್, ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ನಾಗೇಶ್ ವಿ ಎನ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಉಪ ನಿರ್ದೇಶಕರಾದ ಶ್ರುತಿ ಹಾಗೂ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು.