ಮೈಸೂರು ಅರಮನೆ ಸಮೀಪ ರಾತ್ರೋರಾತ್ರಿ ಶಿವರಾತ್ರಿ ರಾಜೇಂದ್ರ ಶ್ರೀಗಳ ಪ್ರತಿಮೆ ಪ್ರತಿಷ್ಠಾಪನೆ:ರಾಜವಂಶಸ್ಥರ ವಿರೋಧ

ಮೈಸೂರು: ಅರಮನೆ ಸಮೀಪ ರಾತ್ರೋರಾತ್ರಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ.

ಗನ್‌ಹೌಸ್ ವೃತ್ತದ ಬಳಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆಯನ್ನು ರಾತ್ರೋರಾತ್ರಿ ಕಾನೂನು ಉಲ್ಲಂಘಿಸಿ ಪ್ರತಿಷ್ಠಾಪನೆ ಮಾಡಲಾಗಿದೆ.

ಈ ಹಿಂದೆ ಜಿಲ್ಲಾಡಳಿತ, ಸುತ್ತೂರು ಮಠದ ನಡುವೆ ಪತ್ರ ವ್ಯವಹಾರ ನಡೆದಿತ್ತು.

ಅನಧಿಕೃತವಾಗಿ ಪ್ರತಿಮೆ ನಿಲ್ಲಿಸಿರುವುದು ಸರಿಯಲ್ಲ, ಕೂಡಲೇ ತೆರವು ಮಾಡಬೇಕು ಎಂದು ಅರಸು ಸಮುದಾಯದ ಮುಖಂಡರು ಪ್ರತಿಭಟನೆ ಕೂಡಾ ನಡೆಸಿದರು.

ಶ್ರೀಗಳ ಪ್ರತಿಮೆ ಪ್ರತಿಷ್ಟಾಪನೆಗೆ ಪ್ರಮೋದಾದೇವಿ ಒಡೆಯರ್ ವಿರೋಧ :

ತಡರಾತ್ರಿ ತಲೆ ಎತ್ತಿರುವ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಪ್ರತಿಮೆ ಸ್ಥಾಪನೆಗೆ ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸ್ವತಃ ಪತ್ರ ಬರೆದಿರುವ ಪ್ರಮೋದಾ ದೇವಿ ಅವರು, ಮೈಸೂರಿನ ಗನ್ ಹೌಸ್ ಬಳಿ ತಡರಾತ್ರಿ ಕ್ರೇನ್ ಉಪಯೋಗಿಸಿ ಪ್ರತಿಮೆ ಸ್ಥಾಪಿಸಿರುವುದು ವಿಷಯ ಅತ್ಯಂತ ದುರದೃಷ್ಟಕರ ಸಂಗತಿ ಎಂದು ವಿಷಾದಿಸಿದ್ದಾರೆ.

ಈ ಕುರಿತು ಪ್ರಬುದ್ಧ ಸಂಸ್ಥೆಯಿಂದ ಇಂತಹ ಘಟನೆ ನಿಜಕ್ಕೂ ಸಮಂಜಸವಲ್ಲ. ಉದ್ದೇಶಿತ ಪ್ರತಿಮೆಯ ಸ್ಥಾಪನೆಗೆ ಸತತವಾಗಿ ಪ್ರತಿರೋಧ ತೋರಿದ ಸಾರ್ವಜನಿಕರಿಗೆ ಸ್ಪಂದಿಸಿ ಈ ಬಗ್ಗೆ ಪುನರ್ವಿಮರ್ಶೆ ಮಾಡಲು ಮನವಿ ಕೂಡ ತಲುಪಿಸಿ ನನ್ನ ಬೆಂಬಲ ಸೂಚಿಸಿದ್ದೇನೆ ಎಂದು ಪ್ರಮೋದದೇವಿ ಒಡೆಯರ್ ಅವರು ಪತ್ರ ಬರೆದಿದ್ದಾರೆ.

ಅರಸು ಜನಾಂಗದವರ ಪ್ರತಿರೋಧ ಹಾಗೂ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವಿರೋಧದ ನಂತರ ಪ್ರತಿಮೆಗೆ ಬಟ್ಟೆ ಹೊದಿಸಿ ಮುಚ್ಚಲಾಗಿದೆ.