ಸಂಸದ ಪ್ರತಾಪ್ ಸಿಂಹ ಕುರಿತ ಅವಹೇಳನಾಕಾರಿ ಪೋಸ್ಟರ್: ಶಿವರಾಮು ವಿರುದ್ದ ಬಿಜೆಪಿ ದೂರು

ಮೈಸೂರು: ಸಂಸದ ಪ್ರತಾಪಸಿಂಹ ಕುರಿತು ಅವಹೇಳನಕಾರಿ ಪೋಸ್ಟರ್‌ ಹಾಕಿ ತೇಜೋವಧೆ ಮಾಡಿರುವ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷರ ವಿರುದ್ಧ ಬಿಜೆಪಿ ಎನ್.ಆರ್.ಕ್ಷೇತ್ರದ ಮಾಜಿ ಅಧ್ಯಕ್ಷ ಆನಂದ್ ಅವರು ಲಕ್ಷ್ಮೀ ಪುರಂ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಆನಂದ್,ಪೋಸ್ಟರ್ ಅಳವಡಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಅನುಮತಿ ಪಡೆಯದೆ ಸಹಿ ಸಂಗ್ರಹಣೆ ನೆಪದಲ್ಲಿ ಸಂಸದರ ಭಾವಚಿತ್ರವನ್ನು ಉಗ್ರಗಾಮಿ ರೀತಿ ಕೈ ಯಲ್ಲಿ ಬಾಂಬ್ ಹಿಡಿದಿರುವಂತೆ ಎಡಿಟ್ ಮಾಡಿ ಮೈಸೂರಿನಲ್ಲಿ ಕೋಮು ಗಲಭೆಗೆ ಪ್ರಚೋದಿಸಿದ್ದಾರೆ ಎಂದು ಆರೋಪಿಸಿದರು.

ಇವರುಗಳು ಸಂಸದರ ವಿರುದ್ಧ ದ್ವೇಷ ಕಾರುತ್ತಿರುವುದು ಇದು ಹೊಸತೇನಲ್ಲ ಆದರೆ ಈ ಬಾರಿ ಅತ್ಯಂತ ಹೇಯವಾಗಿ ಬಿಂಬಿಸಿದ್ದಾರೆ.

ಮೈಸೂರಿನವರು ಎಂಬ ವಿಶ್ವಾಸದ ಮೇಲೆ ಸಂಸದರು ಪಾಸ್ ನೀಡಿದ್ದಾರೆ ಹೊರತು ಇಂಥಹ ಯಾವುದೇ ಕುಕೃತ್ಯಗಳನ್ನು ಅವರು ಎಂದಿಗೂ ಬೆಂಬಲಿಸಿಲ್ಲ ಎಂದು ಆನಂದ್ ಹೇಳಿದರು.

ಅನುಮತಿ ಪಡೆಯದೆ ಮಾಡಿರುವ ಸಹಿ-ಸಂಗ್ರಹಣಾ ಪ್ರತಿಭಟನೆ ಮತ್ತು ಸಂಸದರ ಭಾವಚಿತ್ರವನ್ನು ವಿಕೃತವಾಗಿ ಎಡಿಟ್ ಮಾಡಿ ದೇಶದ್ರೋಹಿ ಎಂದು ಬರೆದು, ಕಾನೂನು ಉಲ್ಲಂಘಿಸಿ ಜನಪ್ರತಿನಿಧಿಯನ್ನು ತೇಜೋವಧೆ ಮಾಡಿರುವುದು ಖಂಡನೀಯ ಎಂದರು.

ಈ ಕೂಡಲೇ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ರಾಜಕೀಯ ಒತ್ತಡಕ್ಕೆ ಮಣಿಯದೇ ಕಾನೂನು ಕ್ರಮ ಜರುಗಿಸಬೇಕೆಂದು ಆನಂದ್ ಒತ್ತಾಯಿಸಿದರು.

ಬಿಜೆಪಿ ಹಿಂದುಳಿದ ವರ್ಗದ ನಗರ ಪ್ರಧಾನ ಕಾರ್ಯದರ್ಶಿ ಮನಿರತ್ನ, ನರಸಿಂಹರಾಜ ಕ್ಷೇತ್ರದ ಉಪಾಧ್ಯಕ್ಷ ಪದ್ಮನಾಭ, ಜಯಸಿಂಹ ಶ್ರೀಧರ್, ವಕೀಲರಾದ ಗೋಕುಲ್ ಗೋವರ್ಧನ್, ಹೇಮಂತ್ ಕುಮಾರ್, ಉಮೇಶ್, ಮನೋಜ್, ಸಂದೀಪ, ಧರ್ಮೇಂದ್ರ ಮತ್ತಿತರು ಈ ವೇಳೆ ಹಾಜರಿದ್ದರು.