ಜಿಲ್ಲಾದಿಕಾರಿಗಳ ಮಾತಿಗಿಲ್ಲ ಕಿಮ್ಮತ್ತು ಎಗ್ಗಿಲ್ಲದೆ ವೈದ್ಯರಿಂದ ಚೀಟಿ ರವಾನೆ

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಖಾಸಗಿ ಲ್ಯಾಬ್‍ಗಳಿಗೆ ರೋಗಿಯನ್ನು ಕಳುಹಿಸುವುದು ಹಾಗೂ ಔಷಧಿಗಾಗಿ ಖಾಸಗಿ ಶಾಪ್‍ಗಳಿಗೆ ಚೀಟಿ ಬರೆಯುವುದು ತಪ್ಪಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ ೨೪ ಗಂಟೆಯೊಳಗೇ ವೈದ್ಯರು ಖಾಸಗಿ ಕ್ಲಿನಿಕ್ ಗಳಿಗೆ ಚೀಟಿ ಬರೆದುಕೊಡುತ್ತಿರುವ ಅಂಶ ಬೆಳಕಿಗೆ ಬಂದಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇದೇ ಮಂಗಳವಾರ ಸಾರ್ವಜನಿಕ ದೂರು, ಕುಂದುಕೊರೆತಗಳ ಶೀಘ್ರ ವಿಲೇವಾರಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚನೆ ನೀಡಿದ್ದರು.

ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮಗಳ ಗುರಿ, ಸಾಧನೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವುದರ ಜೊತೆಗೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಬೇಕು.

ದೂರು ದಾಖಲಿಸುವ ಸಾರ್ವಜನಿಕ ವ್ಯಕ್ತಿಗೆ ದೂರವಾಣಿ ಕರೆಮಾಡಿ ಸಮಸ್ಯೆಗಳ ಬಗ್ಗೆ ಖುದ್ದಾಗಿ ವಿಚಾರಿಸಬೇಕು, ಆಡಳಿತದ ಬಗ್ಗೆ ಜನರಲ್ಲಿ ನಂಬಿಕೆ, ಭರವಸೆ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ನಿಗದಿತ ಕಾಲಮಿತಿಯಲ್ಲಿ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅರಿತು ಇತ್ಯರ್ಥಪಡಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ದೂರುಗಳನ್ನು ಪರಿಹರಿಸುವಲ್ಲಿ ಯಾವುದೇ ಸಬೂಬು ಹೇಳುವುದನ್ನು ಸಹಿಸುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಶಿಲ್ಪಾನಾಗ್ ತಾಕೀತು ಮಾಡಿದ್ದರು.

ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಸ್ಕ್ಯಾನಿಂಗ್ ಹಾಗೂ ಎಕ್ಸರೇ ಯಂತ್ರಗಳು ದುರಸ್ತಿಗೊಳಗಾಗಿದೆ ಎಂದು ಖಾಸಗಿ ಲ್ಯಾಬ್‍ಗಳಿಗೆ ರೋಗಿಯನ್ನು ಕಳುಹಿಸುವುದು ಹಾಗೂ ಔಷಧಿಗಾಗಿ ಖಾಸಗಿ ಶಾಪ್‍ಗಳಿಗೆ ಚೀಟಿ ಬರೆಯುವುದು ತಪ್ಪಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.

ಜೋಡಿರಸ್ತೆ ಹಾಗೂ ಯಡಬೆಟ್ಟ ಸಮೀಪದಲ್ಲಿರು ಸರ್ಕಾರಿ ಆಸ್ಪತ್ರೆಯ ಬಹುತೇಕ ವೈದ್ಯರು ಸಮೀಪದ ಖಾಸಗಿ ಮೆಡಿಕಲ್ ಅವರೊಂದಿಗೆ ಕೈ ಜೋಡಿಸಿ ಚೀಟಿ ಬರೆದುಕೊಡುತ್ತಿರುವ ಅಂಶಗಳು ಗೋಚರವಾಗುತ್ತಿದೆ.

ಮತ್ತೊಂದೆಡೆ ಆಯುರ್ವೇದಿಕ್ ವಿಭಾಗದ ವೈದ್ಯರು ಆಂಗ್ಲ ಮೆಡಿಸನ್ ಬರೆಯುವಂತಿಲ್ಲ ಎಂಬ ನಿಯಮವಿದ್ದರೂ ಚಾಮರಾಜನಗರ ಬಹುತೇಕ ವೈದ್ಯರು ಆಂಗ್ಲ ಮೆಡಿಸನ್ ಬರೆದುಕೊಡುತ್ತಾರೆ.

ಜಿಲ್ಲಾದಿಕಾರಿಗಳು ವಿಶೇಷ ಗೌಪ್ಯ ತಂಡ ರಚಿಸಿ ಲ್ಯಾಬ್, ಮೆಡಿಕಲ್ ಸ್ಟೋರ್ ಗಳು,ಚೀಟಿ ಬರೆಯುವ ವೈದ್ಯರ ಪಟ್ಟಿ ಮಾಡಿ ಅಂತವರು ಬರೆದಿಡೊ ಚೀಟಿ ಪತ್ತೆ ಹಚ್ಚಿ ಕ್ರಮ ಜರುಗಿಸಿ ಶಿಕ್ಷೆ ನೀಡಿದರೆ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದಾಗಿದೆ.ಹಜಹ