ಲೋಕಸಭೆಯಲ್ಲಿ ಸ್ಮೋಕ್ ಬಾಂಬ್: ಆರೋಪಿಗಳ ಮೊಬೈಲ್​ ಫೋನ್​ಗಳು ರಾಜಸ್ಥಾನದಲ್ಲಿ ಪತ್ತೆ!

ನವದೆಹಲಿ,ಡಿ.17- ಲೋಕಸಭೆಯಲ್ಲಿ ಕಲಾಪ‌ದ ವೇಳೆ ಸ್ಮೋಕ್ ಬಾಂಬ್‌ ಹಾಕಿ ಕೋಲಾಹಕ ಸೃಷ್ಟಿಸಿದ ಆರೋಪಿಗಳ
ಮೊಬೈಲ್​ ಫೋನ್​ಗಳು ರಾಜಸ್ಥಾನದಲ್ಲಿ ಪತ್ತೆಯಾಗಿವೆ!.

ಡಿ.13 ರಂದು ನಡೆದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದುವರಿದಿದ್ದು ಆರೋಪಿಗಳ ಮೊಬೈಲ್ ಪತ್ತೆ ಹಚ್ಚಿದ್ದಾರೆ.

ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಘಟಕ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಡಿ.17‌ ರ ಬೆಳಗ್ಗೆ ಆರೋಪಿಗಳಿಗೆ ಸಂಬಂಧಿಸಿದ ಸುಟ್ಟ ಸ್ಥಿತಿಯಲ್ಲಿದ್ದ ಮೊಬೈಲ್​ ಫೋನ್​ಗಳ ಬಿಡಿ ಭಾಗಗಳು, ಬಟ್ಟೆಗಳು ಮತ್ತು ಶೂಗಳನ್ನು ವಶಕ್ಕೆ ಪಡೆದುಕೊಂಡಿದೆ.

ಎಲ್ಲಾ ಆರೋಪಿಗಳ ಫೋನ್​ಗಳು ಪ್ರಕರಣದ ಮಾಸ್ಟರ್​ ಮೈಂಡ್​ ಲಲಿತ್​ ಝಾ ಬಳಿ ಇದ್ದವೆಂದು ತಿಳಿದುಬಂದಿದೆ. ಎಲ್ಲ ಫೋನ್​ಗಳನ್ನು ಮುರಿದು ಹಾಕಿ ಬಳಿಕ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ.

ಸರ್ಕಾರಕ್ಕೆ ತಮ್ಮ ಸಂದೇಶ ರವಾನಿಸಲು, ಆಡಳಿತದ ಮೇಲೆ ಪ್ರಭಾವ ಬೀರುವ ಕೆಲವು ಮಾರ್ಗಗಳ ಬಗ್ಗೆ ಐವರು ಆರೋಪಿಗಳು ಫೋನ್ ಗಳಲ್ಲಿ ಚರ್ಚೆ ನಡೆಸಿದ್ದರು ಎಂದು ಹೇಳಲಾಗಿತ್ತು.

ಆರಂಭದಲ್ಲಿ ಆರೋಪಿಗಳು ತಮ್ಮ ದೇಹಕ್ಕೆ ಅಗ್ನಿಶಾಮಕ ಜೆಲ್​ ಲೇಪಿಸಿಕೊಂಡು ಸದನದಲ್ಲೇ ಬೆಂಕಿ ಹಚ್ಚಿಕೊಳ್ಳುವ ಬಗ್ಗೆ ಯೋಜನೆ ರೂಪಿಸಿದ್ದರು.

ಆದರೆ, ಭದ್ರತೆ ಮತ್ತು ಹಣದ ಕೊರತೆಯಿಂದ ಇದು ಅಸಾಧ್ಯ ಎಂಬ ಕಾರಣಕ್ಕೆ ಕೈಬಿಟ್ಟಿದ್ದರು. ಸಂಸತ್ತಿನ ಒಳಗೆ ಕರಪತ್ರಗಳನ್ನು ಹಂಚುವ ಬಗ್ಗೆಯೂ ಯೋಚಿಸಿದ್ದರು. ಆದರೆ ಅಂತಿಮವಾಗಿ ಕಲರ್ ಸ್ಪ್ರೇ ಮಾಡುವ ನಿರ್ಧಾರ ಕೈಕೊಂಡಿದ್ದರು.