ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ ಮಾಸುವ ಮುನ್ನವೇ ಇನ್ನೊಂದು ಆಘಾತಕಾರಿ ಘಟನೆ ಹಾವೇರಿಯಲ್ಲಿ

ಹಾವೇರಿ: ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಬೆಳಗಾವಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮತ್ತು ಹಲ್ಲೆ ಪ್ರಕರಣದ ಬೆನ್ನಲ್ಲೇ ಇನ್ನೊಂದು ಆತಂಕಕಾರಿ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ತಮ್ಮ ಮಗಳು ಓಡಿಹೋಗಿದ್ದಕ್ಕೆ ಕೋಪಗೊಂಡ ಯುವತಿಯ ಪೋಷಕರು ಮತ್ತು ಸಂಬಂಧಿಕರು ಸೋಮವಾರ ರಾತ್ರಿ ಯುವಕನ ನಿವಾಸದ ಮೇಲೆ ದಾಳಿ ಮಾಡಿ, ಯುವಕನ ಚಿಕ್ಕಪ್ಪನನ್ನು ಅಪಹರಿಸಿ, ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ.

ಈ ಘಟನೆ ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮದಲ್ಲಿ ನಡೆದಿದೆ.

ಚಳಗೇರಿ ಗ್ರಾಮದ ಸಂಗೀತಾ ಡಿಸೆಂಬರ್ 15ರಂದು ಮುದೇನೂರು ಗ್ರಾಮದ ಪ್ರಕಾಶ್ ಎಂಬುವವರ ಜತೆ ಪರಾರಿಯಾಗಿದ್ದರು. ಎರಡೂ ಕುಟುಂಬಗಳ ತೀವ್ರ ವಿರೋಧದ ನಡುವೆಯೂ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ.

ಪ್ರಕಾಶ್ ಅವರ ಪೋಷಕರು ಮತ್ತು ಸಂಬಂಧಿಕರು ಆತನಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಯುವತಿ ಮನೆಯವರು ಶಂಕಿಸಿದ್ದಾರೆ. ಹೀಗಾಗಿ, ಪ್ರಕಾಶ್ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ.

ಪ್ರಕಾಶ್ ಚಿಕ್ಕಪ್ಪ ಪ್ರಶಾಂತ್ ಅವರನ್ನು ತಮ್ಮ ವಾಹನದಲ್ಲಿ ರಾಣೇಬೆನ್ನೂರು ಪಟ್ಟಣಕ್ಕೆ ತಮ್ಮೊಂದಿಗೆ ಕರೆತಂದಿದು ಅವರ ಅಂಗಿಯನ್ನು ಬಿಚ್ಚಿ ಹಲವು ಬಾರಿ ಥಳಿಸಲಾಗಿದೆ.

ಈ‌ ಘಟನೆ ಪೊಲೀಸ್ ಠಾಣೆ ಎದುರಲ್ಲೇ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಯುವಕನ ಮನೆಯವರು ರಾಣೆಬೆನ್ನೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಈ ಹಿಂದೆ ಎರಡು ಕುಟುಂಬಗಳು ಸಾಲದ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದವು ಎಂದು ಮೂಲಗಳು ತಿಳಿಸಿವೆ.

ಈಗ ಯುವಕ,ಯುವತಿ ಎಲ್ಲಿದ್ದಾರೆ ಎಂಬುದು ಇನ್ನೂ ಗೊತ್ತಾಗಿಲ್ಲ, ಯುವತಿ ಮನೆಯವರು ಹಲಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಹುಡುಕಾಟ ಪ್ರಾರಂಭಿಸಿ, ತನಿಖೆ ನಡೆಸುತ್ತಿದ್ದಾರೆ.