ಮೈಸೂರು: 2024ರ ಜನವರಿ 26, 27 ಹಾಗೂ 28 ರಂದು ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗ ಮಂದಿರದಲ್ಲಿ ಮೈಸೂರು ಫೆಸ್ಟ್ – 2023 ಅನ್ನು ಆಯೋಜನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಸಿ ಮಹದೇವಪ್ಪ ತಿಳಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಹಮ್ಮಿಕೊಂಡಿದ್ದ ಮೈಸೂರು ಫೆಸ್ಟ್ – 2023ರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವರು, ಮೈಸೂರಿನ ಸಾಂಸ್ಕೃತಿಕ ಸೊಬಗು, ಪರಂಪರೆ, ಪ್ರವಾಸೋದ್ಯಮ ವಾಣಿಜ್ಯೋದ್ಯಮ ಹಾಗೂ ಮೈಸೂರಿನ ಹಿರಿಮೆಯನ್ನು ಮುಮ್ಮಡಿಗೊಳಿಸಲು ಈ ಫೆಸ್ಟ್ ಸಹಕಾರಿಯಾಗಿದೆ ಎಂದು ಹೇಳಿದರು.
ನೂತನವಾಗಿ ಅನಾವರಣಗೊಂಡ ಲೋಗೋವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಸಂಸ್ಥೆಗಳು ಅನುದಾನಿತ ಸಂಸ್ಥೆಗಳು ಮತ್ತು ಇತರೆ ಖಾಸಗಿ ಕ್ಷೇತ್ರಗಳಲ್ಲಿ ಬಳಸುವುದರ ಮೂಲಕ ಜಿಲ್ಲೆಯ ಪ್ರಖ್ಯಾತಿಗೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಅವರು ಮಾತನಾಡಿ, ಮೈಸೂರು ಫಸ್ಟ್ 2023ರ ಅಂಗವಾಗಿ ಮೈಸೂರು ಪರಂಪರೆಯನ್ನು ಬಿಂಬಿಸುವ ಅತ್ಯುತ್ತಮ ಕಲಾ ತಂಡಗಳಿಂದ ನಗಾರಿ, ಡೊಳ್ಳು, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳು ಹಾಗೂ ದೊಡ್ಡವರಿಗಾಗಿ ಚಿತ್ರಸಂತೆ, ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಮೈಸೂರು ಸ್ಥಳೀಯ ಉತ್ಪನ್ನಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ದಿಷ್ಟ ಬೆಲೆಗೆ ಒಂದೇ ಸೂರಿನಡಿ ಮಾರಾಟ ಮಾಡಲು ಫ್ಲೀ ಮಾರ್ಕೆಟಿಂಗ್ಆಯೋಜನೆ, ಆಹಾರಮೇಳ, ಫ್ಯಾಷನ್ ಶೋ, ಗಾಳಿಪಟ ಉತ್ಸವ, ರಾಕ್ ಬ್ಯಾಂಡ್ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ಎಂ. ಕೆ ಸವಿತಾ ಅವರು ಮಾತನಾಡಿ, ಪೊಲೀಸ್ ಬ್ಯಾರಿಗೇಟ್, ಸಿಗ್ನಲ್ ಬೋರ್ಡ್ ಪೊಲೀಸ್ ಚೌಕಿಗಳಲ್ಲಿ ನಮ್ಮ ಪರಂಪರೆ ನಿಮ್ಮ ತಾಣ ಎಂಬ ಅಡಿ ಬರಹವನ್ನು ಒಳಗೊಂಡ ಮೈಸೂರಿನ ನೂತನ ಲೋಗೋ ಅಳವಡಿಕೆಗೆ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪೋಲಿಸ್ ವರಿಷ್ಠಾಧಿಕಾರಿ ಸೀಮಾಲಾಟ್ಕರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಿನೇಶ್ ಕುಮಾರ್, ಪ್ರಾಚ್ಯ ವಸ್ತು ಸಂಗ್ರಹಾಲಯದ ಆಯುಕ್ತ ದೇವರಾಜು, ಡಿಸಿಪಿ ಮುತ್ತುರಾಜ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ ಹರೀಶ್ ಹೋಟೆಲ್ ಓನರ್ ಅಸೋಸಿಯೇಷನ್ ಅಧ್ಯಕ್ಷ ನಾರಾಯಣ್ ಗೌಡ, ಮೈಸೂರು ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ. ಬಿ ಲಿಂಗರಾಜು, ಮೈಸೂರು ಸಂಘ ಸಂಸ್ಥೆಗಳ ಅಧ್ಯಕ್ಷರಾದ ಪ್ರಶಾಂತ್ ಬಿ ಎಸ್ ಮತ್ತಿತರರು ಪಾಲ್ಗೊಂಡಿದ್ದರು.