ಮೈಸೂರು: ಮೈಸೂರಿನ ಜಯನಗರದಲಿರುವ ಇಸ್ಕಾನ್ ಟೆಂಪಲ್ ನಲ್ಲಿ ವೈಕುಂಠ ಏಕಾದಶಿಯನ್ನು ಇದೆ ಡಿಸೆಂಬರ್ 23ರಂದು ಆಚರಿಸಲಾಗುತ್ತದೆ ಎಂದು ಪಂಕಜಾಂಘ್ರಿದಾಸ ತಿಳಿಸಿದರು.
ಜಯನಗರದ ಇಸ್ಕಾನ್ ಟೆಂಪಲ್ ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮೈಸೂರಿನ ಪ್ರಧಾನ ವ್ಯವಸ್ಥಾಪಕ ಪಂಕಜಾಂಘ್ರಿದಾಸ ಅವರು ವೈಕುಂಠ ಏಕಾದಶಿ ಕುರಿತು ಮಾಹಿತಿ ನೀಡಿದರು.
ಇಸ್ಕಾನ್ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯನ್ನು ಶನಿವಾರದಂದು ಆಚರಿಸಲಾಗುತ್ತಿದ್ದು, ದೇವಸ್ಥಾನದಲ್ಲಿ ವಿಶೇಷವಾದ ವೈಕುಂಠ ದ್ವಾರವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಅಂದು ಬೆಳಿಗ್ಗೆ 9ಗಂಟೆಯಂದ ರಾತ್ರಿ ಹತ್ತರವರೆಗೆ ಹಲವಾರು ಮಂದಿ ಗಾಯನ ಮತ್ತು ವಾದ್ಯ ಕಲಾವಿದರು ಶ್ರೀಕೃಷ್ಣನ ಉತ್ಸವವನ್ನು ಆಚರಿಸುವವರು ಎಂದು ಅವರು ತಿಳಿಸಿದರು.
ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಹೇಳಿದ ದಿನವಾದ ಗೀತಾ ಜಯಂತಿಯೊಂದಿಗೆ ವೈಕುಂಠ ಏಕಾದಶಿಯೂ ಸೇರಿರುವುದರಿಂದ ಈ ಮಂಗಳಕರ ದಿನದ ನೆನಪಿಗಾಗಿ ಮಧ್ಯಾಹ್ನ ಎರಡರಿಂದ ಸಂಜೆ ಐದರವರೆಗೆ ಭಗವದ್ಗೀತೆಯ ಸಂಪೂರ್ಣ ಏಳುನೂರು ಶ್ಲೋಕಗಳ ಪಠಣ ನಡೆಯಲಿದೆ ಎಂದು ಹೇಳಿದರು.
ವೈಕುಂಠ ಏಕಾದಶಿ ದಿನದಂದು ಯಾರೇ ಆಗಲಿ ಭಕ್ತಿ ಶ್ರದ್ಧೆಯಿಂದ ವೈಕುಂಠ ದ್ವಾರದ ಮೂಲಕ ಪ್ರವೇಶ ಮಾಡಿದಲ್ಲಿ ಅವರಿಗೆ ವೈಕುಂಠ ಲೋಕ ಪ್ರಾಪ್ತಿಯಾಗುತ್ತದೆಂದು ಪದ್ಮಪುರಾಣದಲ್ಲಿ ತಿಳಿಸಲಾಗಿದೆ ಎಂದು ಪಂಕಜಾಂಘ್ರಿದಾಸ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ವೈಕುಂಠ ಏಕಾದಶಿಯ ದಿನದಂದು ದೇವಾಲಯಕ್ಕೆ 30,000ಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಬರುವ ನಿರೀಕ್ಷೆ ಇದೆ, ಬೆಳಗಿನಿಂದ ರಾತ್ರಿವರೆಗೂ ಪ್ರಸಾದ ವಿನಿಯೋಗ ಇರಲಿದೆ ಎಂದು ಹೇಳಿದರು.
ಹಾಗೆಯೇ 2024ರ ಜನವರಿ 6 ರಂದುಕೃಷ್ಣ ಬಲರಾಮ ರಥಯಾತ್ರೆ ನಡೆಯಲಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು
ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ರಥಯಾತ್ರೆ ಆರಂಭವಾಗಿ ಜಯನಗರದಲ್ಲಿರುವ ಇಸ್ಕಾನ್ ಟೆಂಪಲ್ ವರೆಗೆ ತಲುಪಲಿದೆ ಎಂದು ಅವರು ತಿಳಿಸಿದರು.
ಈ ರಥಯಾತ್ರೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಸುಮಾರು 20000ಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಭಾಗವಹಿಸಲಿದ್ದಾರೆ ಎಂದು ಪಂಕಜಾಂಘ್ರಿದಾಸ ತಿಳಿಸಿದರು.
ಕಳೆದ 25 ವರ್ಷಗಳಿಂದ ಕೃಷ್ಣ ಬಲರಾಮ ರಥಯಾತ್ರೆಯನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.