ಮೈಸೂರು: ಇತ್ತೀಚಿನ ದಿನಗಳಲ್ಲಿ ವೃತ್ತಿಪರತೆ ಹೋಗಿ ಪತ್ರಿಕೋದ್ಯಮ ವ್ಯಾಪಾರ ಆಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕೆಎನ್ಎಸ್ ಬಡಾವಣೆಯಲ್ಲಿ ಇಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನ ಹಾಗೂ ತರಬೇತಿ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಸಿಎಂ ಮಾತನಾಡಿದರು.
ಪತ್ರಿಕೋದ್ಯಮ ಇಂದು ಕಮರ್ಷಿಯಲ್ ವೃತ್ತಿಯಾಗುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಪತ್ರಿಕಾ ರಂಗ ತನ್ನ ಜವಾಬ್ದಾರಿಯನ್ನು ಇತ್ತೀಚಿನ ದಿನಗಳಲ್ಲಿ ಮರೆತಿದೆ ಅವರು ಬೇಸರ ವ್ಯಕ್ತಪಡಿಸಿದರು.
ಅನಗತ್ಯ ವಿಷಯಗಳನ್ನು ಜನರಿಗೆ ನೀಡಬಾರದು ಎಂದು ಮಾಧ್ಯಮದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು.
ಪತ್ರಕರ್ತರು ಸಮಾಜದಲ್ಲಿ ಕಂದಾಚಾರವನ್ನು ಬೆಳೆಸಬಾರದು,ಊಹಾಪೋಹ ಸುದ್ದಿಗಳನ್ನು ಸಾರ್ವಜನಿಕರಿಗೆ ನೀಡಬಾರದು,ಅನಗತ್ಯ ವಿಷಯಗಳನ್ನು ವೈಭವಿಕರಿಸಬಾರದು ಎಂದು ಪತ್ರಕರ್ತರಿಗೆ ತಿಳಿಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಲು ಪತ್ರಿಕಾ ರಂಗಕ್ಕೆ ಸ್ವಾತಂತ್ರ್ಯ ಇರಬೇಕು ಎಂದು ತಿಳಿಸಿದ ಅವರು ವಸ್ತುನಿಷ್ಠ ಸುದ್ದಿಯನ್ನು ಜನರಿಗೆ ತಲುಪಿಸುವಲ್ಲಿ ಪತ್ರಕರ್ತರು ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು
ಈ ರೀತಿ ಮಾಡಿದಾಗ ಸಮಾಜದಲ್ಲಿ ಬದಲಾವಣೆ ತರಲು ಹಾಗೂ ಜಾಗೃತಿ ತರಲು ಸಾಧ್ಯ ಎಂದು ತಿಳಿಸಿದರು
ನಮ್ಮ ಸಮಾಜದ ವ್ಯವಸ್ಥೆಯನ್ನು ಜನರಿಗೆ ತೋರಿಸುವಂತಹ ಕೆಲಸವನ್ನು ಪತ್ರಿಕಾ ರಂಗ ಮಾಡಬೇಕು, ಅಸಮಾನತೆ ಇರುವುದನ್ನು ತೋರಿಸಬೇಕು ಎಂದು ತಿಳಿಸಿದರು.
ಯುವ ಪತ್ರಕರ್ತರಿಗೆ ತರಬೇತಿ ನೀಡುವಂತಹ ಕಾರ್ಯವನ್ನು ಮಾಡಲು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮುಂದಾಗಿರುವುದಕ್ಕೆ ಸಿದ್ದರಾಮಯ್ಯ ಶ್ಲಾಘಿಸಿದರು.
ನೂತನ ಪತ್ರಿಕಾ ಭವನ ಹಾಗೂ ತರಬೇತಿ ಕೇಂದ್ರದ ಶಂಕುಸ್ಥಾಪನೆಯನ್ನು ನಾನು ನೆರವೇರಿಸಿದ್ದೇನೆ. ನಾನೇ ಈ ಕಟ್ಟಡವನ್ನು ಉದ್ಘಾಟನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಈ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್. ಸಿ ಮಹದೇವಪ್ಪ, ಶಾಸಕ ಜಿ.ಟಿ ದೇವೇಗೌಡ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಟಿ ರವಿಕುಮಾರ್ ಹಾಗೂ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.