ಮೈಸೂರು: ಲೋಕ ಕಲ್ಯಾಣಾರ್ಥವಾಗಿ ಯಾವುದೇ ಜಾತಿ, ಮತ ಭೇದವಿಲ್ಲದೆ ಕ್ರೈಸ್ತ ವರ್ಷಾರಂಭದ ಹಿನ್ನೆಲೆಯಲ್ಲಿ ಜ. 1ರಂದು ವಿಶ್ವಶಾಂತಿ, ಭ್ರಾತೃತ್ವ ಮತ್ತು ಸರ್ವಧರ್ಮ ಸಮನ್ವಯತೆಗಾಗಿ ಪ್ರಾರ್ಥಿಸಲಾಗುವುದು ಎಂದು ಯೋಗಾ ನರಸಿಂಹ ಸ್ವಾಮಿ ದೇವಾಲಯದ ಸಂಸ್ಥಾಪಕರಾದ ನಾಡೋಜ. ಪ್ರೊ. ಭಾಷ್ಯಂ ಸ್ವಾಮೀಜಿಯವರು ತಿಳಿಸಿದರು.
ದೇವಾಲಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸ್ವಾಮೀಜಿಯವರು ಇದೇ ಸಂದರ್ಭದಲ್ಲಿ ಲಡ್ಡು ಪ್ರಸಾದ ನಿವೇದನೆ ಮತ್ತು ಭಕ್ತಾದಿಗಳಿಗೆ ವಿನಿಯೋಗ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಲೋಕಕಲ್ಯಾಣಾರ್ಥ ಮತ್ತು ದೇಶದ ಎಲ್ಲಾ ಜನರ ಒಳಿತಿಗಾಗಿ, ಸುಖ ಶಾಂತಿ ನೆಮ್ಮದಿ ದೊರೆಯಲಿ ಎಂದು ಪ್ರಾರ್ಥಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈಗಾಗಲೇ ಕೊರೋನ ಅಲೆ ದೇಶದಲಿ ಆರಂಭಗೊಂಡಿದ್ದು, ಸಾರ್ವಜನಿಕರು ಹಾಗೂ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಾಸ್ಕ್ ಬಳಸಿ, ಸ್ಯಾನಿಟೈಸರ್ ಉಪಯೋಗಿಸಿ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕ್ಕೊಳ್ಳಬೇಕೆಂದು ಮನವಿ ಮಾಡಿದರು.
ದೇವಸ್ಥಾನದಲ್ಲಿ ಕಳೆದ ಹಲವಾರು ವರ್ಷಗಳಿಂದ ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವಂತೆ ಈ ವರ್ಷವೂ ಸಹ ನೂತನ ಕ್ರೈಸ್ತ ವರ್ಷಾರಂಭದ ದಿನ ಮುಂಜಾನೆ 4 ಗಂಟೆಯಿಂದ ಯೋಗಾನರಸಿಂಹಸ್ವಾಮಿಯವರಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ.
ಮತ್ತು ಶ್ರೀರಂಗಂಕ್ಷೇತ್ರ ಮಧುರೆ ಕ್ಷೇತ್ರಗಳಿಂದ ತರಿಸಿರುವ ವಿಶೇಷ “ತೋಮಾಲೆ” ಮತ್ತು ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ “ಸಹಸ್ರನಾಮರ್ಚನೆ” ಮತ್ತು ದೇವಾಲಯದ ಉತ್ಸವ ಮೂರ್ತಿಯಾದ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೆ ದೇವಾಲಯದ ಆವರಣದಲ್ಲಿ “ಏಕಾದಶ ಪ್ರಾಕಾರೋತ್ಸವ” ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇಪ್ಪತ್ತು ಕ್ವಿಂಟಾಲ್ ಪುಳಿಯೋಗರೆ ನಿವೇದನೆ ಮತ್ತು ದೇವಾಲಯಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡು ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರೊ. ಭಾಷ್ಯಂ ಸ್ವಾಮೀಜಿಯವರು ಹೇಳಿದರು.
2 ಕೆಜಿ ತೂಕದ 15,000 ಲಡ್ಡುಗಳು ಹಾಗೂ 150 ಗ್ರಾಂ ತೂಕದ 2 ಲಕ್ಷ ಲಡ್ಡುಗಳನ್ನು ಎಲ್ಲಾ ಭಕ್ತಾದಿಗಳಿಗೆ ಉಚಿತವಾಗಿ ವಿತರಿಸಲಾಗುವುದು ಎಂದರು.
ಲಡ್ಡು ಪ್ರಸಾದವನ್ನು ವಿಶೇಷವಾಗಿ 60 ಮಂದಿ ನುರಿತ ಬಾಣಸಿಗರಿಂದ ತಯಾರಿಸಲಾಗುತ್ತಿದೆ.
ಲಡ್ಡು ತಯಾರಿಕೆಗೆ ಹಾಕಿರುವ ಸಾಮಗ್ರಿಗಳು: 100 ಕ್ವಿಂಟಾಲ್ ಕಡ್ಲೆಹಿಟ್ಟು, 200 ಕ್ವಿಂಟಾಲ್ ಸಕ್ಕರೆ, 10,000 ಲೀಟರ್ ಖಾದ್ಯ ತೈಲ, 500 ಕೆ.ಜಿ. ಗೋಡಂಬಿ, 500 ಕೆ.ಜಿ. ಒಣದ್ರಾಕ್ಷಿ, 500 ಕೆಜಿ ಅಕ್ಕಿ. , 1000 ಕೆ.ಜಿ ಡೈಮಂಡ್ ಸಕ್ಕರೆ, 2,000 ಸೂರಿ ಸಕ್ಕರೆ, 50 ಕೆ.ಜಿ. ಪಿಸ್ತಾ, ಎಲಕ್ಕಿ, 50 ಕೆ.ಜಿ. ಜಾಕಾಯಿ ಮತ್ತು ಜಾಪತ್ರೆ, 50 ಕೆ.ಜಿ. ಪಚ್ಚೆ ಕರ್ಪೂರ, 200 ಕೆ.ಜಿ ಬಳಸಿ ತಯಾರಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.