ನಾರಾಯಣ ಗೌಡ ಸೇರಿ 29 ಮಂದಿಗೆ 14 ದಿನಗಳ ನ್ಯಾಯಾಂಗ ಬಂಧನ

ಬೆಂಗಳೂರು: ಕನ್ನಡ ನಾಮಫಲಕಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಡಿಸೆಂಬರ್‌ 27ರಂದು ಬೆಂಗಳೂರಿನಲ್ಲಿ ಕನ್ನಡ ನಾಮಫಲಕಗಳಿಗೆ ಆಗ್ರಹಿಸಿ ನಡೆಸಲಾದ ಚಳವಳಿಗೆ ಸಂಬಂಧಿಸಿದಂತೆ ಟಿ.ಎ. ನಾರಾಯಣಗೌಡ ಸೇರಿದಂತೆ 29 ಜನರನ್ನು ದೇವನಹಳ್ಳಿಯಲ್ಲಿ ನ್ಯಾಯಾಧೀಶರ ಮುಂದೆ ಇಂದು ಬೆಳಗ್ಗೆ ಹಾಜರುಪಡಿಸಲಾಗಿತ್ತು.

ನಾರಾಯಣಗೌಡರು ಸೇರಿದಂತೆ ಎಲ್ಲರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು ಎಲ್ಲಾ ಬಂಧಿತರನ್ನು ಪರಪ್ಪನ ಅಗ್ರಹಾರ ಕಾರಗೃಹಕ್ಕೆ ಕಳುಹಿಸಲಾಗಿದೆ.

ಬಂಧನದ ಬೆನ್ನಲ್ಲೇ ಎಲ್ಲಾ ಸಚಿವರ ನಿವಾಸದ ಮುಂದೆ ಪ್ರತಿಭಟನೆ ನಡೆಸುವಂತೆ ನಾರಾಯಣಗೌಡರು ಕರೆ ಕೊಟ್ಟಿದ್ದಾರೆ.

ಬೆಳಗ್ಗೆಯಿಂದ ಊಟ ನೀಡಿಲ್ಲ, ಔಷಧಿ ನೀಡಿಲ್ಲ. ನನ್ನ ಮೊಬೈಲ್ ಕಸಿದು ನೋವುಂಟು ಮಾಡಿದ್ದಾರೆ. ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಕಾರ್ಯಕರ್ತರನ್ನ ಬಂಧನ ಮಾಡಿದ್ದಾರೆ ಎಂದು ನಾರಾಯಣಗೌಡರು ಆರೋಪಿಸಿದರು.

ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಜೈಲಿಗೆ ಕರೆದುಕೊಂಡು ಹೋಗುವ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ನಾರಾಯಣ ಗೌಡರು ಇದೊಂದು ಮುಠ್ಠಾಳ ಸರ್ಕಾರ ಎಂದು ಕಿಡಿಕಾರಿದರು.

ಕರವೇ ನಾರಾಯಣ ಗೌಡ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ.

ಹೆದ್ದಾರಿ ತಡೆ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣವನ್ನು ನಾರಾಯಣ ಗೌಡ ಸೇರಿ ಸಂಘಟನೆಯ ಇನ್ನಿತರ ಕಾರ್ಯಕರ್ತರ ಮೇಲೆ ದಾಖಲು ಮಾಡಿಕೊಳ್ಳಲಾಗಿದೆ.