ಮೈಸೂರು: ಹೊಸ ವರ್ಷದ ಹಿನ್ನಲೆಯಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ರಾತ್ರಿ 1 ಗಂಟೆವರೆಗೆ ವರ್ಷಾಚರಣೆಗೆ ಅವಕಾಶ ನೀಡಲಾಗಿದ್ದು, ಸರ್ಕಾರ ನಿಗದಿಪಡಿಸಿರುವ ಸಮಯವನ್ನು ಎಲ್ಲರೂ ಪಾಲಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮನವಿ ಮಾಡಿದ್ದಾರೆ.
ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್, ಹೋಂಸ್ಟೇ ಸರ್ವಿಸ್ ಅಪಾರ್ಟ್ಮೆಂಟ್, ಅಪಾರ್ಟ್ಮೆಂಟ್ ಅಸೋಸಿಯೇಷನ್, ಮಾಲ್ಸ್, ಸಂಘ ಸಂಸ್ಥೆಗಳು ರಾತ್ರಿ1 ಗಂಟೆಗೆ ಕಾರ್ಯಕ್ರಮ ಮುಗಿಸಬೇಕೆಂದು ತಿಳಿಸಿದರು.
ಅಹಿತಕರ ಘಟನೆ ತಡೆಯಲು 36 ವಿಶೇಷ ಕಾರ್ಯಪಡೆ ತಂಡ ರಚನೆ ಮಾಡಲಾಗಿದೆ. ಮಹಿಳೆಯರ ರಕ್ಷಣೆಗಾಗಿ 8 ಸುರಕ್ಷತಾ ಪಿಂಕ್ ಗರುಡಾ (ಚಾಮುಂಡಿ ಪಡೆ) ರಚನೆ ಮಾಡಲಾಗಿದೆ. ನಗರದ ಪ್ರಮುಖ ಸ್ಥಳದಲ್ಲಿ ಶ್ವಾನದಳ ಮತ್ತು ವಿದ್ವಂಸಕ ಕೃತ್ಯ ತಡೆಗಾಗಿ 4 ತಂಡ ನಿಯೋಜಿಸಲಾಗುವುದು ಎಂದು ಹೇಳಿದರು.
ಮೈಸೂರು ನಗರದಲ್ಲಿರುವ 59 ಸಿಸಿ ಟಿವಿ ಜೊತೆಗೆ ಇನ್ನೂ 275 ಸಿಸಿಟಿವಿ ಅಳವಡಿಸಲಾಗಿದೆ, ಪೊಲೀಸ್ ಕಂಟ್ರೋಲ್ ರೂಂ ಮೂಲಕ ಕಣ್ಗಾವಲು ಇರಿಸಲಾಗಿದೆ. ವೀಲಿಂಗ್, ಸ್ಪೀಡ್, ಕರ್ಕಶ ಶಬ್ದ, ಕುಡಿದು ವಾಹನ ಚಾಲನೆ ತಡೆಗಾಗಿ ಸಂಚಾರ ಪೊಲೀಸರು, ತಜ್ಞರನ್ನೊಳಗೊಂಡ ಕ್ಷಿಪ್ರ ಪಡೆ ರಚನೆ ಮಾಡಲಾಗಿದೆ.
ರಿಂಗ್ ರೋಡ್ ನಲ್ಲಿ 8 ಹೈವೇ ಪೆಟ್ರೋಲ್ ವಾಹನ ನಿಯೋಜನೆ ಮಾಡಲಾಗುತ್ತದೆ. ಒಟ್ಟು 18 ಗರುಡಾ ವಾಹನಗಳ ಗಸ್ತು ತಿರುಗಲಿದೆ. ನಗರದ ಹೊರವಲಯದಲ್ಲಿ 12 ಕಡೆ ಚೆಕ್ ಪೊಸ್ಟ್ ವ್ಯವಸ್ಥೆ ಮಾಡಲಾಗುತ್ತದೆ. ನಗರದ ಒಳ ಭಾಗದಲ್ಲಿ 18 ಕಡೆ ಚಕ್ ಪೊಸ್ಟ್ ನಿರ್ಮಿಸಲಾಗುವುದು
ಹೊಸ ವರ್ಷ ಆಚರಣೆಯ ಕಾರ್ಯಕ್ರಮ ಆಯೋಜನೆಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅನುಮತಿ ಕಡ್ಡಾಯ.
ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿ ಅಶ್ಲೀಲ, ಅರಬೆತ್ತಲೆ ಮಾದಕ ವಸ್ತುಗಳ ಸೇವನೆ, ಜೂಜಾಟ ನಿಷೇಧ ಮಾಡಲಾಗಿದೆ ಎಂದು ರಮೇಶ್ ಬಾನೋತ್ ಹೇಳಿದರು.
ನ್ಯೂಇಯರ್ ಬಂದೋಬಸ್ತ್ ಗಾಗಿ ಡಿಸಿಪಿ 3, ಎಸಿಪಿ 12, ಪಿಐ 30, ಎಎಸ್ಪಿ 70, ಹೆಚ್ಸಿ/ಪಿಸಿ 550, ಸಿಬ್ಬಂದಿ 80, ಸಿಎಆರ್ 12 ತುಕಡಿ, ಕೆಎಸ್ಆರ್ ಪಿ 4 ತಂಡ, ಕಮಾಂಡೋ ಪಡೆ 4, ಶ್ವಾನದಳ 4 ತಂಡ, ಎಎಸ್ಸಿ 4 ತಂಡ ಸಶಸ್ತ್ರ ಪಡೆಗಳನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಚಾಮುಂಡಿ ಬೆಟ್ಟಕ್ಕೆ 31ರ ಸಂಜೆ 7ರವರೆಗೆ ಮಾತ್ರ ಪ್ರವೇಶವಿರಲಿದೆ. ರಾತ್ರಿ 9ಕ್ಕೆ ತಾವರೆಕಟ್ಟೆ ಗೇಟ್ ಬಂದ್ ಮಾಡಲಾಗುತ್ತದೆ. ಚಾಮುಂಡಿ ಬೆಟ್ಟದಲ್ಲಿ ವಾಸಿಸುವ ಜನರಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಿದರು.
ನಗರದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ ಆಯುಕ್ತರು ಕಾನೂನು ಪಾಲಿಸಿ ಹೊಸ ವರ್ಷ ಆಚರಣೆ ಮಾಡಿ ಎಂದು ಮನವಿ ಮಾಡಿದರು