ಮೈಸೂರು: ಸಾಂಸ್ಕೃತಿಕ ನಗರಿಯಲ್ಲೂ ಒಂದು ಹನಿಟ್ರ್ಯಾಪ್ ನಡೆದಿದ್ದು, ಮೂರು ಆರೋಪಿಗಳು ಮೈಸೂರು ಗ್ರಾಮಾಂತರ ಠಾಣಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕೇರಳಾ ಉದ್ಯಮಿಯೊಬ್ಬರನ್ನ ಬಲವಂತವಾಗಿ ಎಳೆದೊಯ್ದು ಮಹಿಳೆಯ ಜೊತೆ ನಗ್ನವಾಗಿ ಮಲಗಿರುವಂತೆ ಫೋಟೋ ತೆಗೆದು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಮೈಸೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಮಾರು 9 ತಿಂಗಳ ಹಿಂದೆ ನಡೆದ ಘಟನೆಯನ್ನ ಬೆನ್ನತ್ತಿದ ಪೊಲೀಸರು ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.
ಫಜಲುಲ್ಲಾ ರೆಹಮಾನ್,ರಿಜ್ವಾನ್ ಹಾಗೂ ಮೋನಾ(ಹೆಸರು ಬದಲಿಸಲಾಗಿದೆ) ಬಂಧಿತ ಆರೋಪಿಗಳು.
ಆರೋಪಿಗಳಿಂದ 50 ಸಾವಿರ ರೂ ಹಾಗೂ ಕೃತ್ಯಕ್ಕೆ ಬಳಸಿದ ಇನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಈ ಆರೋಪಿಗಳು ಕೇರಳಾ ರಾಜ್ಯದ ತಿರುನೆಲ್ಲಿ ಉದ್ಯಮಿ ಸುನ್ನಿ ಎಂಬುವರನ್ನು ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡಿದ್ದರು.
ಮಾರ್ಚ್ ತಿಂಗಳಿನಲ್ಲಿ ಸುನ್ನಿ ಚೆನ್ನೈನಿಂದ ಮೈಸೂರು ಮೂಲಕ ತಮ್ಮ ಕಾರಿನಲ್ಲಿ ಕೇರಳಾಗೆ ತೆರಳುತ್ತಿದ್ದರು.
ಆ ವೇಳೆ ಮಾನಂದವಾಡಿ ರಸ್ತೆಯಲ್ಲಿ ಈ ಆರೋಪಿಗಳು ಸುನ್ನಿಯನ್ನು ಅಡ್ಡಗಟ್ಟಿ ಬಲವಂತವಾಗಿ ಮನೆಯೊಂದಕ್ಕೆ ಕರೆದೊಯ್ದು ಮೋನ ಜೊತೆ ನಗ್ನವಾಗಿ ಮಲಗಿಸಿ ಫೋಟೋ ಹಾಗೂ ವಿಡಿಯೋಗಳನ್ನ ಚಿತ್ರೀಕರಿಸಿದ್ದಾರೆ.
ನಂತರ ಸುನ್ನಿ ರವರಿಗೆ ಫೋಟೋ ಹಾಗೂ ವಿಡಿಯೋಗಳನ್ನ ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಡುವುದಾಗಿ ಹೆದರಿಸಿ 10 ಲಕ್ಷ ಪೀಕುವಂತೆ ಆಗ್ರಹಿಸಿದ್ದಾರೆ.
ಗೌರವಕ್ಕೆ ಅಂಜಿದ ಸುನ್ನಿ 5 ಲಕ್ಷ ಪಾವತಿಸಿದ್ದಾರೆ. ಸುನ್ನಿ ಅವರು ಧರಿಸಿದ್ದ ಚಿನ್ನದ ಉಂಗುರ ಹಾಗೂ ನಗದು ದೋಚಿ ಆರೋಪಿಗಳು ಪರಾರಿ ಆಗಿದ್ದರು.
ನಂತರ ಸುನ್ನಿ ತಿರುನೆಲ್ಲಿ ಠಾಣೆ ಪೊಲೀಸರಿಗೆ ತಿಳಿಸಿ ಪ್ರಕರಣ ದಾಖಲಿಸಿದರು.
ಕೃತ್ಯ ಮೈಸೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಿನ್ನಲೆ ಪ್ರಕರಣ ವರ್ಗಾವಣೆ ಆಗಿತ್ತು.
ತನಿಖೆ ಪ್ರಾರಂಭಿಸಿದ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ತಂಡ ಮಡಿಕೇರಿಯಲ್ಲೂ ಇಂತಹದ್ದೇ ಕೃತ್ಯ ನಡೆಸಿರುವುದು ತನಿಖೆ ವೇಳೆ ಗೊತ್ತಾಗಿದೆ.
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್,ಅಡಿಷನಲ್ ಎಸ್ಪಿ ನಂದಿನಿ ಹಾಗೂ ಡಿ ವೈ ಎಸ್ ಪಿ ಕರೀಂ ರಾವತರ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಡಾ.ಶೇಖರ್ ನೇತೃತ್ವದಲ್ಲಿ ಪಿ ಎಸ್ ಐ ಚಂದ್ರ, ಸಿಬ್ಬಂದಿಗಳಾದ ಮಹೇಶ್,ರವಿ,ಸುನಿಲ್ ಕುಮಾರ್ ಆರೋಪಿಗಳನ್ನು ಬಂಧಿಸಿದ್ದಾರೆ.