ನನ್ನ ಮುಗಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೀರಿ; ಪ್ರತಾಪ್‌ ಸಿಂಹ

ಮೈಸೂರು: ನನ್ನನ್ನು ಮುಗಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೀರಿ ಎಂದು ಸಂಸದ ಪ್ರತಾಪ್‌ ಸಿಂಹ ನುಡಿದಿದ್ದಾರೆ.

ಮರಗಳ್ಳತನ ಪ್ರಕರಣದಲ್ಲಿ ಸಹೋದರ ವಿಕ್ರಂ ಸಿಂಹ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಅವರು ನಿಮ್ಮ ಮಗನ ಸಲುವಾಗಿ ನನ್ನ ಮುಗಿಸುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ಸಿದ್ದರಾಮಯ್ಯ ಅವರ ವಿರುದ್ಧ  ಅಸಮಾಧಾನ ವ್ಯಕ್ತಪಡಿಸಿದರು.

ನೀವು ಬ್ರಿಲಿಯಂಟ್ ಫಾದರ್, ಬ್ರಿಲಿಯಂಟ್ ಪೊಲಿಟಿಷಿಯನ್, ನಿಮ್ಮ ಮಗನನ್ನ ಎಂಪಿ ಮಾಡಿಕೊಳ್ಳುವ ಸಲುವಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದೀರಿ. ಎಫ್‌ಐಆರ್‌ನಲ್ಲಿ ಹೆಸರಿಲ್ಲದಿದ್ದರೂ ನನ್ನ ತಮ್ಮನನ್ನು ಅರೆಸ್ಟ್ ಮಾಡಿಸಿದ್ದೀರಿ ಎಂದು ಟೀಕಿಸಿದರು.

ಮನೆಯಲ್ಲಿ ವಯೋವೃದ್ಧ ತಾಯಿ ಇದ್ದಾಳೆ. ನನ್ನ ತಂಗಿ ಇದ್ದಾಳೆ,‌ ಅವರನ್ನೂ ಬಂಧಿಸಿಬಿಡಿ ನನ್ನ ತೇಜೋವಧೆ ಮಾಡಿದ್ದಾಯಿತು. ಈಗ ನನ್ನ ಕುಟುಂಬವನ್ನೇ ಮುಗಿಸಲು ಪ್ರಯತ್ನ ಮಾಡುತ್ತಿದ್ದೀರಿ ಎಂದು ಭಾವುಕರಾದರು.

ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ, ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲು

ಯಾರನ್ನ ಬೇಕಾದರೂ ತುಳಿಯುತ್ತಾರೆ. ಇದನ್ನ ಸಿದ್ದರಾಮಯ್ಯ ಅವರಿಂದ ಕಲಿಯಬೇಕು.

ಇಂತಹ ತಂದೆ ಎಲ್ಲರಿಗೂ ಸಿಗಲ್ಲ ನೀವೊಬ್ಬ ಬ್ರಿಲಿಯೆಂಟ್ ಫಾದರ್. ನಿಜಕ್ಕೂ‌ ನಿಮ್ಮನ್ನ ಮೆಚ್ಚಿದ್ದೇನೆ. ನಿಮಗೆ ಸಾಷ್ಟಾಂಗ ನಮಸ್ಕಾರಗಳು ಎಂದು ಟಾಂಗ್‌ ನೀಡಿದರು.