ಮೈಸೂರು: ಪತ್ರಕರ್ತನಿಗೆ ಬರವಣಿಗೆ ಎಷ್ಟು ಮುಖ್ಯವೋ ಹಾಗೆ ಪತ್ರಿಕಾ ಛಾಯಾಗ್ರಾಹಕನ ಒಂದು ಫೋಟೋ ಇಡೀ ಕಥೆಯನ್ನೇ ಹೇಳಿಬಿಡುತ್ತದೆ ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಇಂದು ಮೈಸೂರು ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಲಾಗಿದ್ದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.
ಒಂದು ಮನೆಯನ್ನು ಎಷ್ಟೇ ಸುಂದರವಾಗಿ ಕಟ್ಟಿದರೂ ಆ ಮನೆಯಲ್ಲಿ ಛಾಯಾಗ್ರಾಹಕರು ತೆಗೆದ ವಿವಿಧ ಚಿತ್ರದ ಕ್ಯಾಲೆಂಡರ್ ಹಾಕಿದಾಗ ಮುದ ನೀಡುತ್ತದೆ ಎಂದು ತಿಳಿಸಿದರು.
ಮೈಸೂರು ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಅವರು ಈ ಬಾರಿಯ ತಮ್ಮ ಕ್ಯಾಲೆಂಡರ್ ಅನ್ನು ಎಂಟು ಬಾರಿ ಅಂಬಾರಿ ಹೊತ್ತು ಸಾವನ್ನಪ್ಪಿದ ಅರ್ಜುನನಿಗೆ ಭಾವಪೂರ್ವಕವಾಗಿ ಅರ್ಪಿಸಿರುವುದು ಸಮಂಜಸವಾಗಿದೆ ಎಂದು ಶ್ರೀಗಳು ಹೇಳಿದರು.
ಆನೆ ಅರ್ಜುನ ಎಂಟು ಬಾರಿ ದಸರಾದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಸಾಗಿದ್ದಾನೆ ಅವನ ಗಾಂಭೀರ್ಯ ನಡೆಗೆ ಮನಸೋಲದವರಿಲ್ಲ.
ಗೌರವಹಯುತವಾದ ಅಂತ್ಯಸಂಸ್ಕಾರ ದೊರೆತಿದ್ದು ಆತನನ್ನು ಕುರಿತು ಸ್ಮಾರಕ ಮಾಡಲಾಗುತ್ತಿದೆ ಎಂದು ಶಿವರಾತ್ರಿ ಶ್ರೀಗಳು ತಿಳಿಸಿದರು.
ರಾಜರ ಕಾಲದಲ್ಲೂ ಆನೆಯ ಮೇಲೆ ರಾಜರು ಕುಳಿತು ಬಂದಾಗಲೇ ಒಂದು ರೀತಿಯ ಕಳೆ ಇತ್ತು ಎಂದು ಶ್ರೀಗಳು ಸ್ಮರಿಸಿದರು.
ಇದೇ ವೇಳೆ ಹಿರಿಯ ಪತ್ರಕರ್ತ ಪ್ರಭು ರಾಜನ್ ಹಾಗೂ ಖ್ಯಾತ ಛಾಯಾಗ್ರಾಹಕರಾದ ತಿಪ್ಪೇಸ್ವಾಮಿ ಅವರನ್ನು ಶ್ರೀಗಳು ಸನ್ಮಾನಿಸಿದರು.
ಕ್ಯಾಲೆಂಡರ್ ಬಿಡುಗಡೆ ವೇಳೆ ಶಾಸಕ ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯ ಡಾ. ತಿಮಯ್ಯ, ಲಾ ಗೈಡ್ ಗೌರವ ಸಂಪಾದಕ ಹೆಚ್. ಎನ್ ವೆಂಕಟೇಶ್ ಹಾಗೂ ಸಂಘದ ಅಧ್ಯಕ್ಷ ಪ್ರಗತಿ ಗೋಪಾಲಕೃಷ್ಣ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಅವರು ಉಪಸ್ಥಿತರಿದ್ದರು.