ಮೈಸೂರು: ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಮಹಾ ದ್ರೋಹವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿರುವ ಅನ್ಯಾಯ ಕುರಿತು ಸುಮಾರು 7ಪುಟಗಳ ಶ್ವೇತ ಪತ್ರ ಬಿಡುಗಡೆ ಮಾಡಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ 4.81 ಲಕ್ಷ್ಮ ಕೋಟಿ ತೆರಿಗೆ ಸಂಗ್ರಹ ಮಾಡುತ್ತದೆ. ಆದರೆ ಅನುದಾನ ಸರಿಯಾಗಿ ನೀಡುತ್ತಿಲ್ಲ ಎಂದು ದೂರಿದರು.
ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ವಿವಿಧ ಮೂಲಗಳಿಂದ ಹರಿದು ಹೋಗುವ ಸಂಪನ್ಮೂಲಗಳ ವಿವರ ಮುಂದಿಟ್ಟ ಎಂ. ಲಕ್ಷ್ಮಣ್, ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಮಹಾ ದ್ರೋಹವಾಗಿದೆ ಎಂದು ಆರೋಪಿಸಿದರು.
ಆದಾಯ ಮತ್ತು ಕಾರ್ಪೋರೇಟ್ ತೆರಿಗೆ 2.23 ಲಕ್ಷ ಕೋಟಿ. ಜಿಎಸ್ ಟಿ 1.40 ಲಕ್ಷ ಕೋಟಿ ರೂ.ಪೆಟ್ರೋಲ್, ಡೀಸೆಲ್ ಇಂಧನದ ಮೇಲೆ ವಿಧಿಸುವ ಸೆಸ್ ಚಾರ್ಜುಗಳಿಂದ 26 ರಿಂದ 30 ಸಾವಿರ ಕೋಟಿ ಸಂಗ್ರಹವಾಗುತ್ತದೆ.
ರಾಜ್ಯ ವಲಯದಿಂದ ಸಂಗ್ರಹವಾಗುವ ಕಸ್ಟಮ್ ತೆರಿಗೆಗಳಿಂದ 30 ಸಾವಿರ ಕೋಟಿ. ಜಿಎಸ್ ಟಿ ಪ್ರತಿ ತಿಂಗಳು 15 ಸಾವಿರ ಕೋಟಿ ಸಂಗ್ರಹವಾಗುತ್ತಿದೆ. ಹೆದ್ದಾರಿ ಟೋಲ್ ಗಳಿಂದ 3 ಸಾವಿರ ಕೋಟಿ ಸಂಗ್ರಹವಾಗುತ್ತದೆ. ಇವೆಲ್ಲವನ್ನೂ ಸೇರಿಸಿ ಒಟ್ಟು 4.81 ಲಕ್ಷ ಕೋಟಿ ತೆರಿಗೆಯನ್ನ ಕೇಂದ್ರ ಸರ್ಕಾರ ಸಂಗ್ರಹ ಮಾಡುತ್ತದೆ ಎಂದು ತಿಳಿಸಿದರು.
ಅದರಲ್ಲಿ ನಮಗೆ ಶೇ. 42 ರಷ್ಟು ವಾಪಸ್ ಕೊಡಬೇಕು. ಆದರೆ ಕೇಂದ್ರ ಸರ್ಕಾರ ಶೇ.10 ರಷ್ಟನ್ನೂ ನಮಗೆ ಕೊಡುತ್ತಿಲ್ಲ. ಈ ಮೂಲಕ ನಮ್ಮ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬರಪರಿಹಾರವನ್ನ ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಎಂ.ಲಕ್ಷ್ಮಣ್ , ನಮ್ಮ ಸರ್ಕಾರದ ವಿರುದ್ದ ಅನಾವಶ್ಯಕ ಅರೋಪ ಗಳನ್ನು ಮಾಡುತ್ತಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಾರೆ ಎಂದು ಟೀಕಿಸಿದರು.
ಬಿಜೆಪಿ ನಾಯಕ ಯತ್ನಾಳ್ ಅವರೇ ತಮ್ಮ ಸರ್ಕಾರದ ವಿರುದ್ಧ 47 ಪುಟಗಳ ಕಂಪ್ಲೇಂಟ್ ಮಾಡಿದ್ದಾರೆ. ಇದರ ತನಿಖೆ ಕೈಗೊಂಡರೆ ಹಲವು ಮಂದಿ ನಾಯಕರು ಜೈಲಿಗೆ ಹೋಗುತ್ತಾರೆ ಎಂದು ಹೇಳಿದರು.
ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನವರು ಒಂದಂಕಿಯನ್ನು ದಾಟಲ್ಲ. 28 ಕ್ಕೆ 28 ನ್ನೂ ಗೆಲ್ಲುತ್ತೇವೆ ಎಂದು ಕನಸು ಕಾಣುತ್ತಾ ಇದ್ದಾರೆ. 8 ಸೀಟು ಗೆಲ್ಲಲಿ ಸಾಕು. ನಾವು 20ಕ್ಕೂ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಎಂ.ಲಕ್ಷ್ಮಣ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಬಿ.ಜೆ ವಿಜಯಕುಮಾರ್, ನಗರ ಅಧ್ಯಕ್ಷ ಆರ್ ಮೂರ್ತಿ ಮತ್ತಿತರ ಸ್ಥಳೀಯ ಮುಖಂಡರು ಹಾಜರಿದ್ದರು.