ಮೈಸೂರು: ಅಯೋಧ್ಯೆ ರಾಮ ಮಂದಿರದ ಗರ್ಭಗೃಹದಲ್ಲಿ ಇರಿಸಲಾದ ರಾಮ ಲಲ್ಲಾನ ವಿಗ್ರಹ ಕೆತ್ತನೆ ಮಾಡಿರುವ ಮೈಸೂರಿನ ಅರುಣ್ ಯೋಗಿ ರಾಜ್ ಅವರ ಕುಟುಂಬದವರನ್ನು ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಪ್ರತಾಪ್ ಸಿಂಹ ಅವರೊಂದಿಗೆ ಶಾಸಕ ಶ್ರೀವತ್ಸ ಮತ್ತಿತರರು ಇಂದು ಮಧ್ಯಾಹ್ನ ಅರುಣ್ ಯೋಗಿರಾಜ್ ಅವರ ತಾಯಿ ಸರಸ್ವತಿ, ಸಹೋದರ ಸೂರ್ಯ ಪ್ರಕಾಶ್ ಹಾಗೂ ಪತ್ನಿ ವಿಜೇತ ಅವರನ್ನು ಸನ್ಮಾನಿಸಿದರು.
ಈ ವೇಳೆ ಪ್ರತಾಪ್ ಸಿಂಹ ಮಾತನಾಡಿ, ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರಕ್ಕೂ ಮೈಸೂರಿಗೂ ಅವಿನಾಭವ ಸಂಬಂಧ ಉಂಟಾಗಿದೆ ಎಂದು ಹೇಳಿದರು.
ರಾಮಲಲ್ಲಾ ವಿಗ್ರಹದ ಕಲ್ಲು ಮೈಸೂರು ತಾಲ್ಲೂಕಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಗೆಜ್ಜೆಗೌಡನಹುಂಡಿಯ ಹಿಂದುಳಿದ ವರ್ಗದ ಸಮುದಾಯದ ರಾಮದಾಸ್ ಎಂಬುವವರ ಜಮೀನಿನದ್ದಾಗಿದೆ.
ಕೆತ್ತನೆ ಕಾರ್ಯ ವನ್ನು ಮೈಸೂರಿನ ಅರುಣ್ ಯೋಗಿರಾಜ್ ಮಾಡಿದ್ದಾರೆ ಶತಮಾನಗಳ ವರೆಗೂ ಅವರ ಹೆಸರು ಶಾಶ್ವತವಾಗಿರಲಿದೆ ಎಂದು ತಿಳಿಸಿದರು.
ಇದೇ 22 ರಂದು ದೇಶಾದ್ಯಂತ ಎಲ್ಲಾ ಮಂದಿರಗಳಲ್ಲಿ ಪೂಜೆ ಪುನಸ್ಕಾರಗಳು ನೆರೆವೇರಲಿದೆ.
ರಾಮಮಂದಿರದ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾನದ ಮುಖಾಂತರ ಶ್ರೀರಾಮ ಮಂದಿರ ಉದ್ಘಾಟನೆಗೊಂಡು ಕೋಟ್ಯಂತರ ಜನರ ಕನಸು ನನಸಾಗಲಿದೆ ಎಂದು ಹೇಳಿದರು.
ಈ ವೇಳೆ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಹಾಗೂ ಬಿಜೆಪಿ ಮುಖಂಡರು ಹಾಜರಿದ್ದರು.