ರಾಮ ಲಲ್ಲಾ ಶಿಲೆ ಸಿಕ್ಕ ಜಾಗದಲ್ಲಿ ರಾಮ ಮಂದಿರ ನಿರ್ಮಾಣ -ಜಿಟಿಡಿ

ರಾಮ ಲಲ್ಲಾ ಶಿಲೆ ಸಿಕ್ಕ ಜಾಗದಲ್ಲಿ ರಾಮ ಮಂದಿರ ನಿರ್ಮಾಣ -ಜಿಟಿಡಿ

ಮೈಸೂರು: ನಗರದ ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿ ಗ್ರಾಮದಲ್ಲಿ ಸಿಕ್ಕ ಕಪ್ಪು ಶಿಲೆಯಲ್ಲಿ ಅಯೋಧ್ಯೆಯ ಬಾಲರಾಮನನ್ನು ಕೆತ್ತಲಾಗಿರುವುದರಿಂದ ಇದೇ ಜಾಗದಲ್ಲಿ ಶ್ರೀರಾಮ ದೇವಸ್ಥಾನ ಕಟ್ಟಲಾಗುವುದು ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಅಯೋಧ್ಯೆಯ ಬಾಲರಾಮನ ಕೆತ್ತನೆಗೆ ಬಳಕೆಯಾದ ಕಪ್ಪು ಶಿಲೆ ಸಿಕ್ಕ ಜಮೀನಿನಲ್ಲೇ ಶ್ರೀರಾಮ ಮಂದಿರ ಕಟ್ಟುವ ನಿರ್ಧಾರ ಮಾಡಲಾಗಿದ್ದು,ಜನವರಿ 22 ರಂದು ಬೆಳಗ್ಗೆ ಈ ದೇವಸ್ಥಾನದ ಭೂಮಿಪೂಜೆ ನಡೆಯಲಿದೆ ಎಂದು ತಿಳಿಸಿದರು.

ಜಾಗ ಸಿಕ್ಕ ಸ್ಥಳದ 4 ಗುಂಟೆ ಜಮೀನನ್ನು ಮಂದಿರ ನಿರ್ಮಾಣಕ್ಕೆ ಸಂತೋಷದಿಂದ ಕೊಡುವುದಾಗಿ ಜಮೀನು ಮಾಲೀಕ ರಾಮದಾಸ್ ಹೇಳಿದ್ದಾರೆ ಎಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ಶಾಸಕರು ತಿಳಿಸಿದರು.

ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಮ್ಮ ಕ್ಷೇತ್ರದ ಗ್ರಾಮದಲ್ಲೇ ಕೃಷ್ಣ ಶಿಲೆ ಸಿಕ್ಕಿದೆ. ಆ ಶಿಲೆಯಿಂದ ಮೂಡಿಬಂದ ಶ್ರೀರಾಮ ಮೂರ್ತಿ ದರ್ಶನಕ್ಕೆ ಇಡೀ ಜನತೆ ಕಾಯುತ್ತಿದೆ  ಇಂತಹ ಅವಕಾಶ ನಮ್ಮ ಕ್ಷೇತ್ರಕ್ಕೆ ಲಭಿಸಿದ್ದರಿಂದ ನಾನೂ ಕೂಡ ಸೌಭಾಗ್ಯವಂತ ಎಂದು ಖುಷಿ ವ್ಯಕ್ತಪಡಿಸಿದರು.

ಜಮೀನನ ಮಾಲೀಕ ದಲಿತ ಸಮುದಾಯದವರು. ರಾಮಮಂದಿರಕ್ಕಾಗಿ ಜಮೀನನ್ನೇ ಬಿಟ್ಟುಕೊಡುತ್ತೇನೆ ಎಂದು ಒಪ್ಪಿಕೊಂಡಿದ್ದಾರೆ. ಇದೆಲ್ಲ ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಸೌಭಾಗ್ಯ ಎಂದು ಹೇಳಿದರು.

ಮೂರ್ತಿ ಕೆತ್ತನೆಗೆ ಅರುಣ್‌ ಯೋಗಿರಾಜ್‌ ಅವರನ್ನೇ ಸಂಪರ್ಕಿಸುತ್ತೇವೆ. ಅವರ ನಿರ್ದೇಶನದಂತೆಯೇ ನಡೆಯುತ್ತೇವೆ ಎಂದು ತಿಳಿಸಿದರು.

ರಾಮಲಲ್ಲಾ ವಿಗ್ರಹ ಕೆತ್ತನೆಗೆ ಬಳಸಿರುವ ಶಿಲೆ ಸಿಕ್ಕ ಜಮೀನಿನ ಮಾಲೀಕರು, ಕಷ್ಟ ಪಟ್ಟು ಶಿಲೆಯನ್ನು ತೆಗೆದ ಶ್ರೀನಿವಾಸ್‌ ಮತ್ತು ಅವರ ಜೊತೆ ಕೆಲಸ ಮಾಡಿದವರನ್ನು ಅಯೋಧ್ಯೆಗೆ ಕಳುಹಿಸುತ್ತೇವೆ ಎಂದು ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.