ಮೈಸೂರು: ದೇಶದ ಮೇಲಿನ ಆಕ್ರಮಣವನ್ನು ತಪ್ಪಿಸಲು ಪ್ರಧಾನಿ ಮೋದಿ ಅವರ ಕೈಯನ್ನು ಬಲಪಡಿಸಬೇಕು ಎಂದು ಮಾಜಿ ಶಾಸಕ ಎಸ್ ಎ ರಾಮದಾಸ್ ಅವರು ತಿಳಿಸಿದರು.
ನಗರದ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ರಾಮದಾಸ್ ಮಾತನಾಡಿದರು.
ಭಾರತ ದೇಶವು ವಿಶ್ವಗುರುವಾಗುವತ್ತ ಸಾಗಿದೆ. ಈ ನಿಟ್ಟಿನಲ್ಲಿ ಚೀನಾ ಸೇರಿದಂತೆ ಕೆಲ ದೇಶಗಳು ಭಾರತದ ಮೇಲೆ ದಾಳಿ ಮಾಡಲು ಸನ್ನದ್ಧವಾಗಿದೆ, ಮೋದಿ ಅವರನ್ನು ಈ ಬಾರಿ ಗೆಲ್ಲಿಸದಿದ್ದರೆ ದೇಶಕ್ಕೆ ಅಪಾಯ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಜನತೆ ಬಿಜೆಪಿಯನ್ನು ದೇಶಾದ್ಯಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸುವ ಮೂಲಕ ಮೋದಿ ಕೈಯನ್ನು ಬಲಪಡಿಸಬೇಕು ಎಂದು ಅವರು ಕರೆ ನೀಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ಜಿಲ್ಲೆಗಳು ಸೇರಿದಂತೆ ಇಡೀ ದೇಶಾದ್ಯಂತ ಒಂದೊಂದು ಕ್ಲಸ್ಟರ್ ಗಳನ್ನು ರಚಿಸಲಾಗಿದೆ.
ಹಾಗೆಯೇ ಮೈಸೂರು ಕ್ಲಸ್ಟರ್ ನಲ್ಲಿ ಮೈಸೂರು,ಚಾಮರಾಜನಗರ,ಮಂಡ್ಯ ಹಾಸನವನ್ನು ಸೇರಿಸಿ ಒಂದು ಕ್ಲಸ್ಟರ್ ಮಾಡಲಾಗಿದ್ದು ಆ ಕ್ಲಸ್ಟರ್ ಅಧ್ಯಕ್ಷ ಸ್ಥಾನವನ್ನು ನನಗೆ ನೀಡಲಾಗಿದೆ ಎಂದು ರಾಮದಾಸ್ ತಿಳಿಸಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಲಸ್ಟರ್ ನಲ್ಲಿ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲಿದೆ,ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು ಈ ಕಾರ್ಯದಲ್ಲಿ ಭಾಗವಹಿಸಿ ಮೋದಿ ಅವರ ಕೈ ಬಲಪಡಿಸಲಿದ್ದೇವೆ ಎಂದು ರಾಮದಾಸ್ ಹೇಳಿದರು.
ಪ್ರಶ್ನೆ ಒಂದಕ್ಕೆ ಉತ್ತರಿಸಿದ ರಾಮದಾಸ್ ಅವರು ನಾನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಅಲ್ಲ, ನನ್ನ ಈ ನಿರ್ಧಾರದ ನಂತರವೇ ನನಗೆ ಕ್ಲಸ್ಟರ್ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮೈಸೂರು ಕ್ಲಸ್ಟರ್ ನಲ್ಲಿ ಬಿಜೆಪಿಯಾಗಲಿ ಅಥವಾ ಜೆಡಿಎಸ್ ಅಭ್ಯರ್ಥಿಯೇ ಆಗಲಿ ಯಾರನ್ನೇ ಸ್ಪರ್ಧೆಗೆ ನಮ್ಮ ಪಕ್ಷ ಸೂಚಿಸಿದರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ರಾಮದಾಸ್ ತಿಳಿಸಿದರು.
ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ರಿಪಬ್ಲಿಕ್ ಡೇ ಕಾರ್ಯಕ್ರಮಕ್ಕೆ ನಮ್ಮ ರಾಜ್ಯದಿಂದ 14 ಮಂದಿ ಆಹ್ವಾನಿತರಾಗಿದ್ದಾರೆ, ಈ ಪೈಕಿ ನಾಲ್ಕು ಮಂದಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರು ಹಾಗೂ10 ಮಂದಿ ವಿಶ್ವಕರ್ಮ ಯೋಜನೆ ಅಡಿ ಆಯ್ಕೆಯಾದ ಫಲಾನುಭವಿಗಳು ಎಂದು ರಾಮದಾಸ್ ಇದೇ ವೇಳೆ ತಿಳಿಸಿದರು.
ನಾಳೆ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮೈಸೂರು ಸಜ್ಜುಗೊಂಡಿದ್ದು ತಮ್ಮ ಕಚೇರಿ ಬಳಿ ಇರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನಾಳೆ ಬೆಳಗ್ಗೆ ಸಲ್ಲಿಸಲಾಗುತ್ತದೆ ಎಂದು ರಾಮದಾಸ್ ಹೇಳಿದರು.