ರಾಮಲಲ್ಲಾ ಪ್ರತಿಷ್ಠಾಪನೆಯಿಂದ ಇಡೀ ಪ್ರಪಂಚಕ್ಕೆ ಒಳಿತಾಗಲಿ -ಗಣಪತಿ ಶ್ರೀಗಳು

ಮೈಸೂರು: ರಾಮನ ಊರು ಅಯೋಧ್ಯೆ ಇಂದು ಚರಿತಾತ್ಮಕ ಘಟನೆಗೆ ಸಾಕ್ಷಿಯಾಗಿದೆ, ನಮ್ಮ ತಾತ ಮುತ್ತಾತರ, ಸಾಧು ಸಂತರ 500 ವರ್ಷಗಳ ತಪಸಿಗೆ ಇಂದು ಫಲ ಸಿಕ್ಕಿದೆ ಎಂದು ಅವಧೂತ ದತ್ತ ಪೀಠದ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನುಡಿದರು.

ಇಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಪ್ರಯುಕ್ತ ಆಶ್ರಮದಲಿ ಶ್ರೀರಾಮದೇವರ ಮಹಾಸಾಮ್ರಾಜ್ಯ ಪಟ್ಟಾಭಿಷೇಕ ನೆರವೇರಿಸಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಕ್ತರಿಗೆ ಆಶೀರ್ವಚನ ನೀಡಿದರು.

ರಾಮಲಲ್ಲಾ ಪ್ರತಿಷ್ಠಾಪನೆಯಿಂದ ಇಡೀ ಪ್ರಪಂಚಕ್ಕೆ ಒಳಿತಾಗಲಿ ಎಂದು ಶ್ರೀಗಳು ಹಾರೈಸಿದರು.

ರಾಮಲಲ್ಲಾ ಪಟ್ಟಾಭಿಷೇಕದ ಪ್ರಯುಕ್ತ ನಮ್ಮ ದತ್ತಪೀಠದಲ್ಲೂ ರಾಮೋತ್ಸವ ಹಮ್ಮಿಕೊಂಡಿದ್ದೇವೆ ಜೊತೆಗೆ ಶ್ರೀ ರಾಮ ಸಾಮ್ರಾಜ್ಯ ಪಟ್ಟಾಭಿಷೇಕ ನೆರವೇರಿಸಿದ್ದೇವೆ ಎಂದು ತಿಳಿಸಿದರು.

ಹಿಂದೆ ನಾವು ಅಯೋಧ್ಯೆಗೆ ಹೋಗಿದ್ದಾಗ ಶತಶ್ಲೋಕಿ ರಾಮಾಯಣ ಪಾರಾಯಣ ಮಾಡಿ ಬಂದಿದ್ದೇವೆ ಆಗಲೇ ಅಯೋಧ್ಯೆಯಲ್ಲಿ ಇನ್ನು 12 ವರ್ಷದೊಳಗೆ ಇಲ್ಲಿ ರಾಮನ ಆಲಯ ನೆರವೇರುತ್ತದೆ ಎಂದು ಸಂಕಲ್ಪ ಮಾಡಿದ್ದೆವು ಅದು ಇಂದು ನೆರವೇರಿದೆ ಇದು ನನಗೆ ಅತ್ಯಂತ ಸಂತಸ ತಂದಿದೆ ಎಂದು ತಿಳಿಸಿದರು.

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಂತಹ ಅದ್ಭುತ ಕ್ಷಣ ನೋಡಿ ನಮಗೆ ಮೈ ಜುಮ್ ಎಂದಿದೆ, ಬಾಲರಾಮನ ಮೂರ್ತಿಯನ್ನು ನಮ್ಮ ಮೈಸೂರಿನ ಯೋಗಿರಾಜ್ ಅವರು ಕೆತ್ತಿರುವುದು ಅತ್ಯಂತ ಸಂತಸ. ಅವರಿಗೆ ಒಳ್ಳೆಯದಾಗಲಿ ಎಂದು ಶ್ರೀಗಳು ಹಾರೈಸಿದರು.

ಅರುಣ್ ಯೋಗಿರಾಜ್ ಅವರ ತಂದೆ ಕೂಡ ನಮ್ಮ ಆಶ್ರಮದ ಭಕ್ತರು ಅವರು ಮೈಸೂರಿನವರು ಎಂಬುದೇ ಅತಿ ಸಂತಸದ ವಿಷಯ ಎಂದರು.

ಶ್ರೀ ರಾಮರಿಗೂ ನಮ್ಮ ಕರ್ನಾಟಕಕ್ಕೂ ಸಂಬಂಧವಿದೆ, ಶ್ರೀರಾಮರು ಬಂದು ಹೋದ ಅನೇಕ ಕ್ಷೇತ್ರಗಳು ಇಲ್ಲಿವೆ ಅವರು ಸೀತೆಯನ್ನು ಹುಡುಕಿಕೊಂಡು ಬಂದಿದ್ದರು ಜೊತೆಗೆ ಆಂಜನೇಯ ಸ್ವಾಮಿ ಹಂಪೆಯ ಪಂಪಾ ನದಿ ತೀರದಲ್ಲಿ ಜನಿಸಿದ್ದರು ಎಂದು ಹೇಳಲಾಗುತ್ತದೆ ಇದು ಹನುಮನಾಡು ಕೂಡ.

ಆದರೆ ಕೆಲವರು ತಿರುಪತಿಯಲ್ಲಿ ಆಂಜನೇಯ ಸ್ವಾಮಿ ಜನನ ಎಂದು ಹೇಳುತ್ತಾರೆ ಇರಲಿ ಒಟ್ಟು ಆರು ಕಡೆ ಹನುಮ ಜಯಂತಿ ಮಾಡಲಾಗುತ್ತದೆ ಮಾಡಲಿ ಇದರಲ್ಲಿ ತಪ್ಪೇನಿಲ್ಲ ಒಳ್ಳೆಯದೇ ದೇವರು ಎಲ್ಲಾ ಕಡೆ ಇರುತ್ತಾರೆ ಎಂದು ಶ್ರೀಗಳು ನುಡಿದರು.

ಕೆಲವರು ರಾಮ ಸ್ಮರಣೆ ಮಾಡದೆ, ರಾಮ ದರ್ಶನ ಮಾಡದೆ ದೂರ ಇದ್ದಾರೆ ಆದರೆ ಇಂತಹ ಶುಭದಿನದಲ್ಲಿ ರಾಮದರ್ಶನ ಮಾಡದೆ ಇರಬಾರದು ಎಂದು ಇದೆ ವೇಳೆ ಶ್ರೀಗಳು ತಿಳಿಹೇಳಿದರು.

ಭರತ ಭೂಮಿಯಲ್ಲಿ ಜನಿಸಿದ ನಾವೆಲ್ಲ ರಾಮನ ಅನುಯಾಯಿಗಳು ಎಲ್ಲರಿಗೂ ರಾಮನ ಕೃಪೆಯಾಗಲಿ ಎಂದು ಶ್ರೀಗಳು ಶುಭ ಹಾರೈಸಿದರು.

ನಾವು ದತ್ತನ ಭಕ್ತರಾದರೂ ಕೂಡ ರಾಮಭಕ್ತರು ಹೌದು, ಅಯೋಧ್ಯೆಗೂ ನಮ್ಮ ಆಶ್ರಮಕ್ಕೂ ನಂಟಿದೆ ಎಂದು ಹೇಳಿದರು ಸ್ವಾಮೀಜಿ.

ಕರ್ನಾಟಕದ ಅದರಲ್ಲೂ ನಮ್ಮ ಮೈಸೂರಿನ ಶಿಲೆಯಿಂದ ಅರುಣ್ ಯೋಗಿರಾಜ್ ಅವರು ಮೂರ್ತಿ ಮಾಡಿದ್ದಾರೆ, ರಾಮಭಕ್ತರಾದ ಪ್ರಧಾನಿ ನರೇಂದ್ರ ಮೋದಿಯವರು ಈ ಅದ್ಭುತವನ್ನು ನೆರವೇರಿಸಿದ್ದಾರೆ,ಈ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಆಹ್ವಾನಿಸಿದ್ದರು ಆದರೆ ನನಗೆ ಇಂದು ಹೋಗಲಾಗಲಿಲ್ಲ ಮುಂದಿನ ದಿನಗಳಲ್ಲಿ ಹೋಗುತ್ತೇನೆ ಎಂದು ಶ್ರೀ ಗಣಪತಿ ಸಚ್ಚಿದಾನಂದ ‌ಸ್ವಾಮೀಜಿ ತಿಳಿಸಿದರು.

ಇಂದು‌ ಬೆಳಿಗ್ಗೆ 9 ಗಂಟೆಗೆ, ದತ್ತಪೀಠದ ಶ್ರೀದತ್ತ ವೇಂಕಟೇಶ್ವರ ದೇವಸ್ಥಾನದಿಂದ ನಾದಮಂಟಪಕ್ಕೆ ಶ್ರೀರಾಮದೇವರ ರಥೋತ್ಸವ ನೆರವೇರಿತು.

ಇದೇ ವೇಳೆ ಯಾಗಶಾಲೆಯಲ್ಲಿ ಶ್ರೀರಾಮತಾರಕ ಮಹಾಯಾಗ ನೆರವೇರಿಸಲಾಯಿತು

ನಂತರ ಶ್ರೀರಾಮದೇವರ ಮಹಾಸಾಮ್ರಾಜ್ಯ ಪಟ್ಟಾಭಿಷೇಶ ಹಾಗೂ ಶತ ಶ್ಲೋಕಿ ರಾಯಣವನ್ನು ಸಹ ಪಾರಾಯಣ ಮಾಡಲಾಯಿತು.

ಇಂದು ಅವಧೂತ ದತ್ತ ಪೀಠದಲ್ಲಿ ಭಕ್ತರೆಲ್ಲರಿಗೂ ಹಬ್ಬದೂಟವನ್ನು ಸಹಾ ಆಯೋಜಿಸಲಾಗಿತ್ತು.