ಹುಡುಗಿ ಚುಡಾಯಿಸಿದಕ್ಕೆ ಜಗಳ: ಆಟೋ ಡ್ರೈವರ್ ಕೊಲೆ

ಮೈಸೂರು: ಹುಡುಗಿ ಚುಡಾಯಿಸಿದನೆಂಬ ಕಾರಣಕ್ಕೆ ರೌಡಿ ಶೀಟರ್‌ ಒಬ್ಬ ತನ್ನ ಸಹೋದರ ಹಾಗೂ ಸಂಬಂಧಿ ಜೊತೆ ಸೇರಿ ಆಟೋ ಡ್ರೈವರ್ ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಡಕಳ್ಳಿ ಗ್ರಾಮದ ಗೂಡ್ಸ್ ಆಟೋ ಡ್ರೈವರ್ ರವಿಚಂದ್ರ (33) ಕೊಲೆಯಾದ ದುರ್ದೈವಿ.

ರೌಡಿ ಶೀಟರ್ ಸುನಿಲ್ ರಾಜ್,ಆತನ ತಮ್ಮ ನಿಖಿಲ್ ರಾಜ್ ಹಾಗೂ ಈತನ ಚಿಕ್ಕಪ್ಪ ನಾರಾಯಣ ಕೊಲೆ ಆರೋಪಿಗಳು.

ಮೃತನ ತಮ್ಮ ಶಿವರಾಜ್ ಗಾರೆ ಕೆಲಸ ಮಾಡಿಕೊಂಡಿದ್ದು ಈತನ ಸಹಚರನೊಬ್ಬ ಸುನಿಲ್ ರಾಜ್ ಗೆ ಪರಿಚಯ ಇರುವ ಹುಡುಗಿಗೆ ಚುಡಾಯಿಸಿದ್ದಾನೆ.

ಈ ವೇಳೆ ಗಲಾಟೆ ಆಗಿದ್ದು ಶಿವರಾಜ್ ಮಧ್ಯೆ ಪ್ರವೇಶಿಸಿ ಗಲಾಟೆ ಬಿಡಿಸಿದ್ದಾರೆ.ಇದರಿಂದ ದ್ವೇಷ ಬೆಳೆಸಿಕೊಂಡ ಸುನಿಲ್ ರಾಜ್ ಹಾಗೂ ನಿಖಿಲ್ ರಾಜ್ ರಾತ್ರಿ ಚಿಕ್ಕಪ್ಪ ನಾರಾಯಣ್ ಜೊತೆ ರವಿಚಂದ್ರ ಮನೆ ಬಳಿ ಬಂದು ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ.

ಈ ವೇಳೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.ಈ ವೇಳೆ ಸುನಿಲ್ ರಾಜ್ ಡ್ರಾಗನ್ ನಿಂದ ರವಿಚಂದ್ರ ಹೊಟ್ಟೆಗೆ ಚುಚ್ಚಿದ್ದಾನೆ.

ಜಗಳ ಬಿಡಿಸಲು ಬಂದ ಶಿವರಾಜ್ ಹಾಗೂ ಮಾವ ಮಹೇಶ್ ಗೂ ಗಾಯವಾಗಿದೆ.
ಚಾಕು ಇರಿತದಿಂದ ಗಾಯಗೊಂಡ ರವಿಚಂದ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಸುನಿಲ್ ರಾಜ್, ನಿಖಿಲ್ ರಾಜ್ ಹಾಗೂ ನಾರಾಯಣ ವಿರುದ್ದ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.