ನಂಜನಗೂಡು: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಶುರುವಾದ ಗಲಾಟೆ ಜೋರಾಗಿ ಕಲ್ಲು ತೂರಾಟ ಮಾಡಿದ್ದರಿಂದ ಹಲವರು ಗಾಯಗೊಂ ಘಟನೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದೆ.
ಹಲ್ಲರೆ ಗ್ರಾಮದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆ ಜಾತಿ ಸಂಘರ್ಷಕ್ಕೆ ಎಡೆ ಮಾಡಿದೆ.
ಕಲ್ಲು ತೂರಾಟ ಮಾಡಿದ್ದರಿಂದ ಹಲವು ಮನೆಗಳಿಗೆ ಹಾನಿಯಾಗಿವೆ.ಉದ್ರಿಕ್ತರು ಕೈಗೆ ಸಿಕ್ಕ ವಾಹನಗಳನ್ನ ಜಖಂಗೊಳಿಸಿದ್ದಾರೆ.
ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು,ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪೊಲೀಸ್ ವಾಹನದ ಮೇಲೂ ಕಲ್ಲು ತೂರಾಡಿದ್ದಾರೆ.
ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರಿಗೂ ಗಾಯವಾಗಿದೆ.
ರಸ್ತೆಯೊಂದಕ್ಕೆ ಅಂಬೇಡ್ಕರ್ ನಾಮಫಲಕ ಅಳವಡಿಸುವ ವಿಚಾರದಲ್ಲಿ ಗಲಾಟೆ ಶುರುವಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್ ಹಾಗೂ ಅಡಿಷನಲ್ ಎಸ್ಪಿ ನಂದಿನಿ ಸ್ಥಳದಲ್ಲಿದ್ದಾರೆ, ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನ ನಿಯೋಜಿಸಲಾಗಿದೆ.
ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರೂ ಬೂದಿ ಮುಚ್ಚಿದ ಕೆಂಡದಂತಿದೆ.