ಕೆ.ಆರ್., ಚೆಲುವಾಂಬ ಆಸ್ಪತ್ರೆಗಳಿಗೆ ಶಾಸಕ ಹರೀಶ್‌ಗೌಡ ಭೇಟಿ; ಕಳಪೆ‌ ಕಾಮಗಾರಿ ಮಾಡದಂತೆ ತಾಕೀತು

ಮೈಸೂರು: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವ್ಯಾಪ್ತಿಗೆ ಒಳಪಡುವ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ ಹಾಗೂ ಪಿ.ಕೆ.ಟಿ.ಬಿ ಆಸ್ಪತ್ರೆಗಳಿಗೆ ಶಾಸಕ ಶಾಸಕ ಕೆ. ಹರೀಶ್ ಗೌಡ ಅವರು ಭೇಟಿ ನೀಡಿದರು.

ಶಾಸಕರು ಈ‌ ವೇಳೆ ಅಂದಾಜು 89 ಕೋಟಿ ರೂ ವೆಚ್ಚದಲ್ಲಿ ಒಟ್ಟು 13 ವಿವಿಧ ನವೀಕರಣ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿದರು.  

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಡಾ.ಕೆ.ಆರ್. ದಾಕ್ಷಾಯಿಣಿ, ಚಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೆಂದ್ರ ಕುಮಾರ್ ಹಾಗೂ ಆರೋಗ್ಯ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ದೊರೆಸ್ವಾಮಿ ಮತ್ತು ಸಿಬ್ಬಂದಿ ಈ ವೇಳೆ ಹಾಜರಿದ್ದು‌ ಮಾಹಿತಿ‌ ನೀಡಿದರು.

ಕೆ.ಆರ್. ಆಸ್ಪತ್ರೆಯ ಅಡ್ಮಿನಿಸ್ಟ್ರೇಟಿವ್ ಬ್ಲಾಕ್ ಗೆ ಭೇಟಿ ನೀಡಿ ನವೀಕರಣ ನಡೆದಿರುವ ಕಾಮಗಾರಿ ಪರಿಶೀಲಿಸಿದಾಗ ಕಳಪೆ ಕಾಮಗಾರಿ,ಗೋಡೆಗೆ ಮಾಡಿರುವ ಪ್ಲಾಸ್ಟರಿಂಗ್ ಮುಟ್ಟಿದರೆ  ಪುಡಿಯಾಗುತ್ತಿರುವುದನ್ನು ಮನಗೊಂಡು ತೀವ್ರ ಬೇಸರಪಟ್ಟರು.

ಗುತ್ತಿಗೆದಾರರು ಹಾಗೂ ಆರೋಗ್ಯ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಹರೀಶ್ ಗೌಡ ತರಾಟೆಗೆ ತೆಗೆದುಕೊಂಡರು. 

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಕಟ್ಟಡಗಳ ಬಗ್ಗೆ ಮುತುವರ್ಜಿಯಿಂದ ಕಾಮಗಾರಿ ನಡೆಸುವಂತೆ ತಾಕೀತು ಮಾಡಿದರು.

ಕೆ.ಆರ್. ಆಸ್ಪತ್ರೆಯ ಓಪಿಡಿ ಬ್ಲಾಕ್ ನವೀಕರಣ ಕಾಮಗಾರಿಯನ್ನು ಪರಿಶೀಲಿಸಿ, ಅರ್ಧ ಭಾಗದಲ್ಲಿ ಮಾತ್ರ ಕಾಮಗಾರಿ ನಡೆದಿದ್ದು, ಮತ್ತೊಂದು ಭಾಗದಲ್ಲಿ ವೈದ್ಯರು  ಧೂಳಿನಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಡೀನ್ ಅವರನ್ನು ವಿಚಾರಿಸಿದರು.

ಹೆಚ್ಚು ಕಾರ್ಮಿಕರನ್ನು ಬಳಸಿಕೊಂಡು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ತಿಳಿಸಿದರು.

ಸ್ಥಳ ಪರಿಶೀಲನೆ ನಡೆಸುತ್ತಿದ್ದ ವೇಳೆ ಅಲ್ಲಿಯೇ ಇದ್ದ ಕ್ಯಾಂಟೀನ್ ಗೂ ಭೇಟಿ ನೀಡಿ ಶಾಸಕರು ಪರಿಶೀಲನೆ ನಡೆಸಿದರು. 

ಅನಧಿಕೃತವಾಗಿ ನಡೆಯುತ್ತಿರುವ ಸದರಿ ಕ್ಯಾಂಟೀನ್ಗಳನ್ನು ಪರಿಶೀಲಿಸಿ ಕ್ರಮವಹಿಸುವಂತೆ ಚಲುವಾಂಬ ವೈದ್ಯಕೀಯ ಅಧೀಕ್ಷಕರಿಗೆ ಸೂಚಿಸಿದರು. 

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವ್ಯಾಪ್ತಿಗೊಳಪಡುವ ಎಲ್ಲಾ ಆಸ್ಪತ್ರೆಗಳಿಗೆ ಹೆಚ್ಚಾಗಿ ಬಡ ರೋಗಿಗಳೇ ಬರುತ್ತಾರೆ,ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ತಾಕೀತು ಮಾಡಿದರು.

ಈ ಆಸ್ಪತ್ರೆಯಲ್ಲಿ ಮತ್ತು ಕ್ಯಾಂಟೀನ್‌ಗಳಲ್ಲಿ ಬಡ ರೋಗಿಗಳಿಂದ ಹಣ ವಸೂಲಿ ಹೆಚ್ಚು ಹಣ ವಸೂಲಿ ಮಾಡದಂತೆ ಅಗತ್ಯ ಕ್ರಮವಹಿಸಲು ಹರೀಶ್ ಗೌಡ ತಿಳಿಸಿದರು.