ಪತ್ನಿ ಶೀಲ ಶಂಕಿಸಿ 12‌ ವರ್ಷ  ಗೃಹಬಂಧನ ವಿಧಿಸಿದ್ದ ಪಾಪಿ ಪತಿ

ಮೈಸೂರು: ಪತ್ನಿ ಶೀಲ ಶಂಕಿಸಿ 12 ವರ್ಷದಿಂದ ಮನೆ ಬಾಗಿಲಿಗೆ ಮೂರು ಬೀಗ ಜಡಿದು ಪತ್ನಿಯನ್ನ ದಿಗ್ಬಂದನಲ್ಲಿರಿಸಿದ್ದ ಅಮಾನವೀಯ ಪ್ರಕರಣ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಮನೆಯಿಂದ ಹೊರಬರಲಾಗದೆ ನರಕಯಾತನೆ ಅನುಭವಿಸಿದ್ದ ಪತ್ನಿಯನ್ನ ರಕ್ಷಿಸಲಾಗಿದೆ.

ಎಚ್.ಡಿ.ಕೋಟೆ ತಾಲೋಕಿನ ಎಚ್.ಮಟಕೆರೆ ಗ್ರಾಮದ ಸಣ್ಣಾಲಯ್ಯ ಎಂಬಾತ ತನ್ನ ಪತ್ನಿ ಸುಮಾಳನ್ನ ಗೃಹಬಂಧನದಲ್ಲಿರಿಸಿದ್ದ.

ಇದೇ ತಾಲೋಕಿನ ಹೈರಿಗೆ ಗ್ರಾಮದ ಸುಮಾ 12ವರ್ಷದ ಹಿಂದೆ ವಿವಾಹವಾಗಿದ್ದರು.3ನೇ ಪತ್ನಿಯಾಗಿ ವಿವಾಹವಾದ ಸುಮಾಗೆ ಇಬ್ಬರು ಮಕ್ಕಳಿದ್ದಾರೆ.

ಇಬ್ಬರು ಪತ್ನಿಯರು ಸಣ್ಣಾಲಯ್ಯನ ಕಾಟದಿಂದ ಬೇಸತ್ತು ದೂರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮದುವೆ ಆದ ದಿನದಿಂದಲೂ ಮನೆ ಬಾಗಿಲಿಗೆ ಮೂರು ಬೀಗ ಹಾಕಿ, ಮನೆಯ ಕಿಟಕಿಗಳನ್ನೂ ಸಹ ಭದ್ರ ಪಡಿಸಿ ಯಾರೊಂದಿಗೂ ಮಾತನಾಡದಂತೆ ಸುಮಾ ಅವರಿಗೆ ಸಣ್ಣಾಲಯ್ಯ ಎಚ್ಚರಿಕೆ ನೀಡಿದ್ದ.

ಮನೆಯೊಳಗೆ ಶೌಚಾಲಯ ಕೂಡಾ ಇಲ್ಲ, ಬಕೇಟ್ ಒಂದನ್ನು ಆಕೆಗೆ ಕೊಟ್ಟು ಮಲಮೂತ್ರ ವಿಸರ್ಜಿಸಿ ರಾತ್ರಿ ಹೊರಗೆ ಸುರಿಯುತ್ತಿದ್ದ.

ಸುಮಾ ಅವರ ಸಂಬಂಧಿಕರೊಬ್ಬರಿಂದ ಈಕೆ ಗೃಹ ಬಂಧನದಲ್ಲಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಿಷಯ ತಿಳಿದು ವಕೀಲ ಸಿದ್ದಪ್ಪಾಜಿ ಎಂಬುವರು ಹಾಗೂ ಸಾಂತ್ವನ ಕೇಂದ್ರದವರು ಮತ್ತು ಎಎಸ್ ಐ ಸುಭಾನ್ ಅವರನ್ನೊಳಗೊಂಡ ತಂಡ ಸುಮಾ ಮನೆಗೆ ಭೇಟಿ ನೀಡಿದ್ದಾರೆ.

ಮನೆಯ ಬೀಗ ಮತ್ತು ಬಾಗಿಲು ಮುರಿದು ನಿನ್ನೆ ರಾತ್ರಿ‌ ಸುಮಾ ಹಾಗೂ ಮಕ್ಕಳನ್ನು ರಕ್ಷಿಸಿದ್ದಾರೆ. ಆಕೆಯ ಒಪ್ಪಿಗೆಯಂತೆ ತವರು ಮನೆಯಲ್ಲಿ ಪೊಲೀಸರು ಆಶ್ರಯ ಕೊಡಿಸಿದ್ದಾರೆ.

ಎಚ್.ಡಿ.ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು‌ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.