ಕದ್ದು ಮುಚ್ಚಿ ಕೊಲಂಬೋ ಯಾತ್ರೆ ಮಾಡಿರಲಿಲ್ಲ -ಹೆಚ್. ಡಿ. ಕುಮಾರಸ್ವಾಮಿ

ಬೆಂಗಳೂರು: ಕದ್ದು ಮುಚ್ಚಿ ಕೊಲಂಬೋ ಯಾತ್ರೆ ಮಾಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಶಾಸಕ ಜಮೀರ್ ಹೇಳಿಕೆಗೆ ಕುಮಾರ್ ಸ್ವಾಮಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಜೆಡಿಎಸ್ ಪಕ್ಷದ ಗೌಪ್ಯ ಕಾರ್ಯಸೂಚಿ ಹಾಗೂ ಮುಂದಿನ ರಾಜಕೀಯ ಕಾರ್ಯತಂತ್ರ ಬಗ್ಗೆ ಚರ್ಚಿಸಲು ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ಪ್ರಮುಖ ನಾಯಕರೊಂದಿಗೆ ಶ್ರೀಲಂಕಾದ ಕೊಲಂಬೋಗೆ ಒಮ್ಮೆ ಪ್ರವಾಸ ಹೋಗಿದ್ದು ನಿಜ. ಆದರೆ, ಕದ್ದು ಮುಚ್ಚಿ ಕೊಲಂಬೋ ಯಾತ್ರೆ ಮಾಡಿರಲಿಲ್ಲ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಒಂದಾನೊಂದು ಕಾಲದಲ್ಲಿ ನಮ್ಮ ಪಕ್ಷದಲ್ಲಿದ್ದ ರಾಜಕಾರಣಿಯೊಬ್ಬರು ಜೆಡಿಎಸ್ ಶಾಸಕರು ಮತ್ತು ನಾನು ಕೊಲಂಬೋ ಪ್ರವಾಸ ಕೈಗೊಂಡಿದ್ದಾಗಿ ನೀಡಿರುವ ಹೇಳಿಕೆ ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತಿದೆ. 2014ರ ಜೂನ್ ತಿಂಗಳಲ್ಲಿ ಪಕ್ಷ ಸಂಘಟನೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಕೊಲಂಬೋಗೆ ಪ್ರವಾಸ ಹೋಗುವುದಾಗಿ ಬಹಿರಂಗವಾಗಿಯೇ ಮಾಧ್ಯಮಗಳಿಗೆ ಹೇಳಿ ಹೋಗಿದ್ದಲ್ಲದೇ, ಅಲ್ಲಿ ನಡೆದ ಶಾಸಕರ ಜೊತೆಗಿನ ಚರ್ಚೆಯ ದೃಶ್ಯಾವಳಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೆವು. ಇದರಲ್ಲಿ ಯಾವುದೇ ಗುಟ್ಟು ಇರಲಿಲ್ಲ.
ಕೊಲಂಬೋ ಪ್ರಯಾಣ ಅದೇ ಮೊದಲು ಮತ್ತು ಕೊನೆ. ಇದರಲ್ಲಿ ಬಚ್ಚಿಡುವುದು ಏನೇನೂ ಇಲ್ಲ. ಅವರು ನಮ್ಮೊಂದಿಗೆ ಬಂದಿದ್ದರೆ ಹೊರತು ನಾವು ಅವರೊಂದಿಗೆ ಹೋಗಿರಲಿಲ್ಲ ಎಂದಿದ್ದಾರೆ
ಅಲ್ಲದೆ ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’ ಎಂಬಪುರಂದರದಾಸರ ಪದವನ್ನೂ ಟ್ವೀಟ್ ನಲ್ಲಿ ಹೆಚ್. ಡಿ. ಕುಮಾರ ಸ್ವಾಮಿ ಬರೆದಿದ್ದಾರೆ.